ಅಂಗನವಾಡಿ ಕೇಂದ್ರಕ್ಕೆ ಗ್ರಾಪಂ ಅಧ್ಯಕ್ಷರ ಭೇಟಿ

ಕೋಲಾರ,ಮೇ.೫: ಕೋಲಾರ ಹೊರವಲಯದ ವಿಜಯನಗರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕೊಂಡರಾಜನಹಳ್ಳಿ ಗ್ರಾಮ ಪಂಚಾಯ್ತಿ ಅದ್ಯಕ್ಷೆ ಪುಷ್ಪ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರ ತುಂಬಾ ಚಿಕ್ಕದಾಗಿದ್ದು, ಒಂದು ಸಣ್ಣ ಗೂಡಿನಲ್ಲಿ ಮಕ್ಕಳ ಪಾಲನೆ ಮಾಡಲಾಗುತ್ತಿದೆ, ಇದರಿಂದ ತುಂಬಾ ಸಮಸ್ಯೆಯಾಗುತ್ತಿದ್ದು, ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮನವಿ ಮಾಡಲಾಗುವುದು ಎಂದರು. ಅಲ್ಲದೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಗರ್ಭಿಣಿಯರಿಗೆ ಸೇರಿದಂತೆ ಮಕ್ಕಳಿಗೆ ಸೇರಬೇಕಾಗಿರುವ ಆಹಾರ ಪದಾರ್ಥಗಳು ಸರಿಯಾದ ರೀತಿ ಪೂರೈಕೆ ಮಾಡಬೇಕೆಂದು ಸೂಚಿಸಿದರು.
ಜೊತೆಗೆ ಗುಣಮಟ್ಟದ ಆಹಾರವನ್ನ ಗರ್ಭಿಣಿ ಮಹಿಳೆಯರ ಮನೆ ಬಾಗಿಲಿಗೆ ತಲುಪಿಸಬೇಕೆಂದ ಅವರು, ಅಂಗನವಾಡಿ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ನನ್ನ ಗಮನಕ್ಕೆ ತರಬೇಕೆಂದರು. ಇದೇ ವೇಳೆ ಅಂಗನವಾಡಿ ಕೇಂದ್ರದಲ್ಲಿರುವ ಸಮಸ್ಯೆಗಳ ಕುರಿತು ಸಂಭಂದಪಟ್ಟ ಅಧಿಕಾರಿಗಳೊಂದೊಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಶೀಘ್ರವಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಉಪಸ್ಥಿತರಿದ್ದರು.