ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಫೆಡರೇಷನ್ ಸಮ್ಮೇಳನ

ಬಳ್ಳಾರಿ ಡಿ 27 : ನಗರದ ಗಾಂಧಿಭವನದಲ್ಲಿ ನಿನ್ನೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್‍ನಿಂದ ನಗರ ಶಾಖೆಯ 8ನೇ ಸಮ್ಮೇಳನ ನಡೆಯಿತು. ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಫೆಡರೇಷನ್ ಜಿಲ್ಲಾಧ್ಯಕ್ಷ ಎ.ಆರ್.ಎಂ. ಇಸ್ಮಾಯಿಲ್ ಅವರು, ನಾಡಿನ ಅತಿದೊಡ್ಡ ಮಹಿಳಾ ಸಂಘಟನೆ ಇರುವ ಅಂಗನವಾಡಿ ನೌಕರರ ಒಕ್ಕೂಟವು ಹೆಚ್ಚಿನ ರೀತಿಯಲ್ಲಿ ಪ್ರಜ್ಞಾವಂತರಾಗಿ ಜನಪರ ಹೋರಾಟಗಳಲ್ಲಿ ಭಾಗವಹಿಸಲು ಅವಶ್ಯಕತೆ ಇದೆ ಎಂದರು.
ಕೇಂದ್ರ ಸರ್ಕಾರ ಒಂದರ ಹಿಂದೆ ಒಂದಾಗಿ ಜನಪರ ಯೋಜನೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರದಲ್ಲಿ ತೊಡಗಿದೆ, ಆದ್ದರಿಂದ ನಮ್ಮ ಸಂಘಟನೆಯು ಇನ್ನಷ್ಟು ಪ್ರಜ್ಞಾವಂತರಾಗಿ ಜನಪರ ಹೋರಾಟಗಳಲ್ಲಿ ತಮ್ಮಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯನ್ನು ಒತ್ತಿ ಹೇಳಿದರು. ಸಂಘಟನೆಯ ರಾಜ್ಯ ಸಂಚಾಲಕಿ ಆರ್ಕಾಣಿ ಇವರು ಸ್ವಾಗತ ಬಯಸಿದರು. ಕಾರ್ಯದರ್ಶಿ ಮಂಗಮ್ಮ ವರದಿ ಮಂಡಿಸಿದರು.
ಕಾಂಗ್ರೆಸ್ ಮುಖಂಡ ಎಲ್.ಮಾರೆಣ್ಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಅಂಗನವಾಡಿ ನೌಕರರ ಹೋರಾಟಕ್ಕೆ ತಮ್ಮ ಸಂಘಟನೆಯ ಬೆಂಬಲ ವ್ಯಕ್ತಪಡಿಸಿದರು.