ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ:ಜೂ,28- ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಡಿ ಕಾರ್ಯಕರ್ತೆರು, ಸಹಾಯಕಿಯರ ಫೆಡರೇಷನ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಸಿಡಿಪಿಓ ಕಚೇರಿ ಎದುರು ಧರಣಿ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ಕೇಂದ್ರದಲ್ಲಿನ ಚಟುವಟಿಕೆಗಳನ್ನು ಮೊಬೈಲ್ ಮೂಲಕ ಹಂಚಿಕೊಳ್ಳುವ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್ ಅಧ್ಯಕ್ಷೆ ಬಿ.ಜಯಲಕ್ಷ್ಮಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮೊಬೈಲ್‍ಗಳು ಹಾಳಾಗಿದ್ದು, ಅವುಗಳಿಂದ ಯಾವುದೇ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಕಾರ್ಯಕರ್ತೆಯರು ಮೊಬೈಲ್ ವಾಪಾಸ್ ನೀಡುತ್ತಿದ್ದು, ಇನ್ಮುಂದೆ ಯಾವುದೇ ಮಾಹಿತಿಯನ್ನು  ಮೊಬೈಲ್ ಮೂಲಕ ಹಂಚಿಕೊಳ್ಳುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.
ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯೆ ಕಮಲಾಕ್ಷಿ ಮಾತನಾಡಿ, ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಆಹಾರ ಧಾನ್ಯಗಳು ಕಳಪೆಯಾಗಿದ್ದು, ಫಲಾನುಭವಿಗಳೊಂದಿಗೆ ಕಾರ್ಯಕರ್ತೆಯರು ಜಗಳ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಗುಣಮಟ್ಟದ ಆಹಾರಧಾನ್ಯ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೊಟ್ಟೆ ಟೆಂಡರ್‍ದಾರರು ಕೇಂದ್ರಗಳಿಗೆ ಕಡಿಮೆ ದರ್ಜೆಯ ಮೊಟ್ಟೆಗಳನ್ನು ಸರಬರಾಜು ಮಾಡುತ್ತಿದ್ದಾರೆ. ಹಾಗಾಗಿ ಟೆಂಡರ್ ಪದ್ದತಿ ರದ್ದುಗೊಳಿಸಿ ಬಾಲ ವಿಕಾಸ ಸಮಿತಿಯಿಂದ ಮೊಟ್ಟೆ ಖರೀದಿಸಿ ಕೇಂದ್ರಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಿಡಿಪಿಒ ಅವಿನಾಶ ಗೋಡ್ಕಿಂಡಿ ಮಾತನಾಡಿ, ನಮ್ಮ ಹಂತದಲ್ಲಿ ಪರಿಹರಿಸಲು ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ. ಮೊಬೈಲ್ ವಾಪಾಸ್ ನೀಡುವ ಮತ್ತು ಮಾಹಿತಿ ಹಂಚಿಕೆ ಕೆಲಸಕ್ಕೆ ವಿನಾಯಿತಿ ನೀಡುವುದು ಸಾಧ್ಯವಿಲ್ಲ. ಈ ಕುರಿತು ಇಲಾಖೆ ಸುತ್ತೋಲೆ ಹೊರಡಿಸಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಮೊಬೈಲ್‍ನಲ್ಲಿ ಮಾಹಿತಿ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಫೆಡರೇಷನ್ ಗೌರವ ಅಧ್ಯಕ್ಷೆ ಎನ್.ಮಂಜುಳಾ, ಎಐಟಿಯುಸಿ ಕಾರ್ಯದರ್ಶಿ ಸುರೇಶ ಹಲಗಿ, ಮುಖಂಡ ಶಾಂತರಾಜ ಜೈನ್ ಮಾತನಾಡಿದರು. ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.