ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

ಮೈಸೂರು,ಮಾ.15:- ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸದ 2021-22ರ ಬಜೆಟ್ ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬೆಂಗಳೂರು ಚಲೋ ಸಂದರ್ಭದಲ್ಲಿ ಮನವಿ ಸಲ್ಲಿಸಿ ಸಭೆ ನಡೆದು ಬೇಡಿಕೆಗಳ ಬಗ್ಗೆ ಬಜೆಟ್ ನಲ್ಲಿ ಪರಿಹಾರ ಸಿಗುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರು ನೀಡಿದ್ದರು. ಬಜೆಟ್ ನಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ. ಅಧಿವೇಶನದಲ್ಲಿ ಚರ್ಚಿಸುವಂತೆ ಮಹಿಳಾ ಸಚಿವರಲ್ಲಿ ಒತ್ತಾಯಿಸಿದರು. ಸೇವಾ ಹಿರಿತನದ ಆಧಾರದಲ್ಲಿ ಗೌರವ ಧನ ಹೆಚ್ಚಳ ಮಾಡುವುದು, ದೀರ್ಘ ಸೇವೆ ಸಲ್ಲಿಸಿದವರಿಗೆ ಗೋವಾ ರಾಜ್ಯದ ಮಾದರಿಯನ್ನು ಜಾರಿ ಮಾಡುವುದು, ತಪ್ಪಿದಲ್ಲಿ ಎಲ್ಲರಿಗೂ ಒಪ್ಪುವಂತಹ ಪ್ರತಿವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ನಿಗದಿಪಡಿಸಿದರೆ ಅವರವರ ಸೇವಾವಧಿಗನುಗುಣವಾಗಿ ಸೌಲಭ್ಯ ಸಿಗಲಿದೆ. ಆದ್ದರಿಂದ ದೀರ್ಘ ಸೇವೆ ಸಲ್ಲಿಸಿದವರಿಗೆ ನ್ಯಾಯ ಸಿಗಲಿದೆ. 2015ರ ನಂತರ ನಿವೃತ್ತಿಯಾದ 7294 ಕಾರ್ಯಕಿರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡುವುದು. ನಿವೃತ್ತ ಕಾರ್ಯಕರ್ತರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ 5000ರೂ.ಗಳ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕು. ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಇಎಸ್ ಐ ಯೋಜನೆ ಜಾರಿ ಮಾಡಬೇಕು.ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ ಯುಕೆಜಿ ಪ್ರಾರಂಭಿಸಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಬೇಕು.
ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಕ ಮಾಡುವವರೆಗೂ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ತಯಾರಿಸುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನದ ಅಂತರವನ್ನು ಕಡಿಮೆ ಮಾಡುವುದು, ಬೇರೆ ಯಾವುದೇ ಇಲಾಖೆಯ ಸರ್ವೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುವುದಿಲ್ಲ ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ ಯಾವುದೇ ಬೇಡಿಕೆ ಈಡೇರಿಸಿಲ್ಲ. ಪ್ರಸಕ್ತ ಅಧಿವೇಶನದಲ್ಲಾದರೂ ಬೇಡಿಕೆಯನ್ನು ಈಡೇರಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹದೇವಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.