ಅಂಗನವಾಡಿ ಎದುರಿನ ತೆರೆದ ಬಾವಿಗೆ ತಡೆಗೋಡೆ ನಿರ್ಮಿಸಲು ಸೂಚನೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಜೂ.15: ತಾಲೂಕಿನ ಧುಮ್ಮನಸೂರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬುಧವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಅಧಿಕಾರಿಗಳ ತಂಡದೊದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿಯ ಅಂಗನವಾಡಿ ಕೇಂದ್ರದ ಎದುರು ತೆರೆದ ಬಾವಿ ಇರುವುದನ್ನು ಕಂಡು ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಆತಂಕ ವ್ಯಕ್ತ ಪಡಿಸಿ ಅಂಗನವಾಡಿ ಕೇಂದ್ರದ ಎದುರಲ್ಲೇ ತೆರೆದ ಬಾವಿ ನೆಲಮಟ್ಟದಲ್ಲಿದೆ. ಜತೆಗೆ ಸಾಕಷ್ಟು ಆಳವಿದೆ. ಇದರಿಂದ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.
ಆದರೂ ಇಲ್ಲಿಗೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ತೀವ್ರ ಬೇಸರ ತರಿಸಿದೆ. ತಕ್ಷಣವೇ ತೆರೆದ ಬಾವಿ ಮುಚ್ಚಬೇಕು ಇಲ್ಲದಿದ್ದರೆ ಸೂಕ್ತ ತಡೆಗೋಡೆ ನಿರ್ಮಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬೇಕು ಎಂದರು.
ಕೇಂದ್ರದಲ್ಲಿ ಹಾಜರಾತಿಯಂತೆ ಮಕ್ಕಳು ಮತ್ತು ಸೂಕ್ತ ಸೌಲಭ್ಯ ಇಲ್ಲದಿರುವುದಕ್ಕೆ ಅಸಮಧಾನ ವ್ಯಕ್ತ ಪಡಿಸಿದ ಅವರು ಮಕ್ಕಳ ಆರೈಕೆ ಮತ್ತು ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ಅಂಗನವಾಡಿಯತ್ತ ಹೆಜ್ಜೆ ಹಾಕಬೇಕಾದರೆ ಪೂರಕ ವಾತಾವರಣ ಇರಬೇಕು.
ಇನ್ಮುಂದೆ ಅಂಗನವಾಡಿಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತಿತರ ಸೌಲಭ್ಯ ಕಲ್ಪಿಸಬೇಕು ಎಂದರು.
ಅಲ್ಲಿದ ಇನ್ನೊಂದು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಇಲ್ಲಿಯ ಅಂಗನವಾಡಿ ಕೇಂದ್ರ ರಸ್ತೆಗೆ ಹೊಂದಿಕೊಡಿದೆ. ಜತೆಗೆ ಎದುರಿಗೆ ಚರಂಡಿ ನಿರ್ಮಾಣವಾಗಿದೆ.
ಇದರಿಂದ ಮಕ್ಕಳಿಗೆ ರೋಗದ ಭಯ ಕಾಡುವುದರ ಜತೆಗೆ ಅಂಗನವಾಡಿ ಕೇಂದ್ರ ರಸ್ತೆಗೆ ಹತ್ತಿರ ಇರುವುದರಿಂದ ಅಪಾಯ ತಂದೊಡ್ಡುವ ಸಂಭವಿದ್ದು ಕೂಡಲೇ ಇಲ್ಲಿಯ ಕೇಂದ್ರಕ್ಕೆ ವಿಳಂಬ ಮಾಡದೇ ಸೂಕ್ತ ಸುತ್ತುಗೋಡೆ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಪ್ರಕಾಶ ಹಿರೇಮಠ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪೂರೆ ಇದ್ದರು.