ಅಂಗನವಾಡಿಗಳ ಆರಂಭ: ಚಿಣ್ಣರ ಕಲರವ

ಅಫಜಲಪುರ:ನ.12: ಕೋರೊನಾ ಮಹಾಮಾರಿಯಿಂದ ಶಾಲಾ-ಕಾಲೇಜು, ಅಂಗನವಾಡಿಗಳು ಮಕ್ಕಳಿಲ್ಲದೆ ಬೀಕೋ ಎನ್ನುತ್ತಿದ್ದವು. ಕೋರೊನಾ ರೋಗ ಕಡಿಮೆಯಾಗಿದ್ದು, ಸರಕಾರದ ಆದೇಶದ ಪ್ರಕಾರ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳು ಆರಂಭಗೊಂಡಿವೆ. ಮಕ್ಕಳಿಗೆ ಹೂಗಳನ್ನು ನೀಡುವ ಮೂಲಕ ಸ್ವಾಗತ ಕೋರಿ, ಶೈಕ್ಷಣಿಕ ಚಟುವಟಿಕೆಗಳು ಬಿರುಸುಗೊಂಡಿವೆ. ಅಂಗನವಾಡಿ ಕೇಂದ್ರಗಳಂತು ತಳಿರು ತೋರಣ, ರಂಗೋಲಿ, ಹೂವುಗಳಿಂದ ಶೃಂಗಾರಗೊಂಡು, ಚಿಣ್ಣರನ್ನು ಬರ ಮಾಡಿಕೊಳ್ಳಲಾಗುತ್ತಿದೆ.

ಪಟ್ಟಣದ ಉಸ್ಮಾನಿಯಾ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಭಾಗೀರಥಿ ಜಮಾದಾರ ಅವರು, ಅಂಗನವಾಡಿ ಕೇಂದ್ರಕ್ಕೆ ತಳಿರು ತೋರಣ, ರಂಗೋಲಿ, ವಿವಿಧ ಬಣ್ಣ-ಬಣ್ಣದ ಹೂಗಳಿಂದ ಶೃಂಗರಿಸಿ, ಚಿಣ್ಣರಿಗೆ ದೀಪ ಬೆಳಗುವ ಮೂಲಕ ಹೂಗಳನ್ನು ಕೊಟ್ಟು, ಸ್ವಾಗತಿಸಿ ಮಾತನಾಡಿದ ಅವರು, ಕೋರೊನಾ ರೋಗಕ್ಕೆ ಹೆದರಿ ಒಂದುವರೆ ವರ್ಷಗಳಿಂದ ಅಂಗನವಾಡಿ ಕೇಂದ್ರಗಳು ಮುಚ್ಚಿದ್ದವು. ಸರಕಾರದ ಆದೇಶದ ಪ್ರಕಾರ ಪುನಃ ಅಂಗನವಾಡಿ ಕೇಂದ್ರಗಳು ಆರಂಭಿಸಿದ್ದೇವೆ. ಅಂಗನವಾಡಿ ಆರಂಭವಾಗುತ್ತಿದ್ದಂತೆ, ಮಕ್ಕಳಲ್ಲಿ ಹುರುಪು, ಉತ್ಸಾಹ, ಹುಮ್ಮಸ್ಸು ಕಂಡು ಬರುತ್ತಿದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ ಮಾತನಾಡಿ, ತಾಲೂಕಿನಾದ್ಯಾಂತ ಎಲ್ಲ ಅಂಗನವಾಡಿ ಕೇಂದ್ರಗಳು ಆರಂಭಗೊಂಡಿವೆ. ಚಿಣ್ಣರ ಕಲರವ ಕಂಡು ಸಂತೋಷವಾಗುತ್ತಿದೆ. ಸರಕಾರದಿಂದ ಬರುವ ಎಲ್ಲ ಸೌಲಭ್ಯಗಳು ಅಂಗನವಾಡಿ ಮೂಲಕ ನೀಡಲಾಗುತ್ತಿದೆ. ಶಿಶುಗಳಿಗೆ ಮತ್ತು ಬಾಣಂತಿಯರಿಗೆ ಅಪೌಷ್ಠಿಕ ಕೊರತೆಯಾಗದಂತೆ ಎಲ್ಲರೂ ನೋಡಿಕೊಳ್ಳುವ ಜವಾಬ್ದಾರಿಯಿದೆ. ಇಲಾಖೆಯ ಮೂಲಕ ಎಲ್ಲ ಪೌಷ್ಠಿಕ ಆಹಾರಗಳು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಶಿವಲೀಲಾ ಡಾಂಗೆ, ಗುರುಬಾಯಿ ಸಣ್ಣದಾನಿ, ಶಾರದಾ ಅವಟೆ, ಗಂಗುಬಾಯಿ, ಪುರಸಭೆ ಸದಸ್ಯ ಯಮನಪ್ಪ ಭಾಸಗಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.