ಅಂಗನವಾಡಿಗಳಿಗೆ ಬಣ್ಣ ಬಳಿಸಲು ಸೂಚನೆ

ಮುಳಬಾಗಿಲು, ನ.೨೧: ಪಂಚಾಯತಿ ವ್ಯಾಪ್ತಿಯಲ್ಲಿರುವ ಶಿಥಿಲವಾದ ಶಾಲಾ ಕಟ್ಟಡಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಿಸಿಕೊಡಬೇಕು ಒಂದು ತಿಂಗಳಲ್ಲಿ ಎಲ್ಲ ಅಂಗನವಾಡಿಗಳಿಗೂ ಬಣ್ಣ ಬಳಿಸಬೇಕೆಂದು ಜಿಲ್ಲಾ ಪಂಚಾಯತಿ ಸಿಇಓ ಉಕೇಶ್ ಕುಮಾರ್ ಸೂಚಿಸಿದರು.
ತಾಲೂಕಿನ ದೇವರಾಯಸಮುದ್ರ ಗ್ರಾಮ ಪಂಚಾಯತಿಗೆ ಬುಧವಾರ ಭೇಟಿ ನೀಡಿ ಜನಪ್ರತಿನಿಧಿಗಳ ಜತೆ ಚರ್ಚಿಸಿ ನರೇಗಾ ಕಾಮಗಾರಿಗಳಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ, ಕಟ್ಟಡ ದುರಸ್ಥಿ, ಶೌಚಾಲಯ ನಿರ್ಮಾಣ, ಆಟದ ಮೈದಾನ, ಶೌಚಾಲಯಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಶಿಥಿಲವಾದ ಚಿಕ್ಕ ಕಟ್ಟಡದಲ್ಲಿರುವ ಗ್ರಂಥಾಲಯವನ್ನು ಪಂಚಾಯತಿ ಕಟ್ಟಡದ ಮೇಲ್ಬಾಗದ ಸಭಾಂಗಣಕ್ಕೆ ಸ್ಥಳಾಂತರಿಸುವ ಮೂಲಕ ಡಿಜಿಟಲ್ ಗ್ರಂಥಾಲಯವನ್ನು ಮಾಡಬೇಕು ಎಂದು ಹೇಳಿದರು.
ಸಿಎಸ್‌ಆರ್ ಫಂಡ್‌ನಿಂದ ಶಾಲಾ ಕಟ್ಟಡಗಳ ರಿಪೇರಿಗೆ ಅವಕಾಶ ಮಾಡಿಕೊಡಬೇಕು, ಹಳ್ಳಿಗಳಲ್ಲಿ ವಾಟರ್ ಪ್ಲಾಂಟ್ ಇದ್ದರೂ ನೀರಿಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಗುತ್ತಿಗೆದಾರರು ಈ ಸಂಬಂಧ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಪಂ ಸದಸ್ಯ ಜಮ್ಮನಹಳ್ಳಿ ಕೃಷ್ಣಪ್ಪ ದೂರಿದಾಗ ತಕ್ಷಣ ಸ್ಪಂದಿಸಿದ ಸಿಇಒ ಅವರು ಎಇಇ ರವೀಂದ್ರ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಸಮೀಕ್ಷೆ ನಡೆಸುವ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ತಾಕೀತು ಮಾಡಿದರು.
ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕಾಮನೂರು ಗ್ರಾಮದಲ್ಲಿ ಕೊಳವೆಬಾವಿ ಕೊರೆಯಲು ಕ್ರಮ ಕೈಗೊಂಡಿರುವುದಾಗಿ ಪಿಡಿಓ ಚಲಪತಿ ಮಾಹಿತಿ ನೀಡಿದರು.
ಸಿಇಒ ಅವರು ದೇವರಾಯಸಮುದ್ರದ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳ ಬಿಸಿಯೂಟವನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು ಅಂಗನವಾಡಿ ಕಟ್ಟಡವನ್ನು ಪರಿಶೀಲಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಕಾಮನೂರು ಬಾಲಕೃಷ್ಣ, ಗ್ರಾಮಲೆಕ್ಕಿಗ ಯಲ್ಲಪ್ಪ ಇದ್ದರು