ಅಂಗಡಿಗಳ ಮೇಲೆ ದಾಳಿ ದಂಡ ವಸೂಲಿ

ಕೆಂಭಾವಿ:ಎ.24:ರಾಜ್ಯದಲ್ಲಿ ಕೊರೊನಾ ದಿನೆ ದಿನೆ ಹೆಚ್ಚುತ್ತಿರುವದರಿಂದ ರಾಜ್ಯ ಸರಕಾರ ಗುರುವಾರದಿಂದ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿತ್ತು. ಸರಕಾರದ ಆದೇಶವನ್ನು ಮೀರಿ ಕೆಂಭಾವಿಯಲ್ಲಿ ಕೆಲವು ಅಗತ್ಯ ವಸ್ತುಗಳಲ್ಲದ ಮಳಿಗೆಗಳನ್ನು ತೆರೆದಿದ್ದರಿಂದ ಪುರಸಭೆ ಅಧಿಕಾರಿಗಳು ಅಂತಹ ಅಂಗಡಿಗಳಿಗೆ ದಿಢೀರ್ ದಾಳಿ ಮಾಡಿ ದಂಡ ಹಾಕಿದರು.
ರೂ.200 ರಿಂದ ರೂ.1000 ದವರೆಗೆ ದಂಡ ವಸೂಲಿ ಮಾಡಿ ಅಂಗಡಿಗಳಿಗೆ ಬೀಗ ಹಾಕಿಸಲಾಯಿತು. ಇನ್ನೊಮ್ಮೆ ಸರಕಾರದ ಆದೇಶ ಮೀರಿ ಅಂಗಡಿಗಳನ್ನು ತೆರೆದಿದ್ದೆ ಆದಲ್ಲಿ ಕೇಸ್ ದಾಖಲಿಸುವದಾಗಿ ಪುರಸಭೆ ಸಿಬ್ಬಂದಿ ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಸೆಮಿ ಲಾಕಡೌನ್ ಘೋಷಿಸಿದ್ದಾರೆ. ಎಲ್ಲ ನಾಗರಿಕರು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸರಕಾರಕ್ಕೂ ಸಹಕರಿಸಬೇಕು ಎಂದು ಪುರಸಭೆ ಅಧಿಕಾರಿ ಸಾಯಬಣ್ಣ ಹೇಳಿದರು. ಅಂಗಡಿ ಮಾಲಿಕರು ದಂಡ ವಸೂಲಿಗೆ ಮಣಿಯದೆ ಅನಧಿಕೃತವಾಗಿ ಮಾರಾಟ ಮಾಡುವದು ಕಂಡು ಬಂದರೆ ಮುಲಾಜಿಲ್ಲದೆ ಕೇಸ್ ದಾಖಲಿಸಿ, ಅಂಗಡಿ ಬಂದ್ ಮಾಡಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ಪುರಸಭೆ ಅಧಿಕಾರಿಗಳು ಮುಖ್ಯ ಬಜಾರ್‍ನಿಂದ ಹಳೆ ಬಸ್ ನಿಲ್ದಾಣದವರೆಗೆ ತೆರಳಿ ಅನಧಿಕೃತವಾಗಿ ಅಂಗಡಿಗಳನ್ನು ನಡೆಸುತ್ತಿದ್ದವರ ಮೇಲೆ ಕ್ರಮ ಕೈಗೊಂಡರು. ಶುಕ್ರವಾರ ರೂ.3000 ದಂಡ ವಸೂಲಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ಮಲ್ಲಣ್ಣ, ರಮೇಶ, ಶರಣಪ್ಪ ದೊಡ್ಡಮನಿ, ಭೀಮಣ್ಣ, ಸಿದ್ರಾಮಯ್ಯ ಇಂಡಿ, ರಶೀದ್ ಸೇರಿದಂತೆ ಇತರರಿದ್ದರು.