ಅಂಕಲಗಾ ಗ್ರಾಮಕ್ಕೆ ಪಿಯು ಕಾಲೇಜು ಮಂಜೂರು: ಶಾಸಕ ಡಾ. ಅಜಯ್ ಸಿಂಗ್ ಸ್ವಾಗತ

ಕಲಬುರಗಿ,ಸೆ.22:ಜೇವರ್ಗಿ ತಾಲೂಕಿನ ಅಂಕಲಗಾ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಿ ಮಾಡಿರುವ ಸರ್ಕಾರದ ಕ್ರಮವನ್ನು ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಸ್ವಾಗತಿಸಿದ್ದಾರೆ.

ವಿಧಾನ ಸಭೆ ವಿರೋಧ ಪಕ್ಷ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಈ ಕುರಿತಂತೆ ಹೇಳಿಕೆ ನೀಡಿದ್ದು ಅಂಕಲಗಾ ಗ್ರಾಮದ ಪಪೂ ಕಾಲೇಜು ಬೇಡಿಕೆಯನ್ನು ಮುಂದಿಟ್ಟುಕೊಂಡು ತಮ್ಮ ನೇತೃತ್ವದಲ್ಲಿ ಶಿಕ್ಷಣ ಸಚಿವರಿಗೆ 2 ಬಾರಿ ನಿಯೋಗದಲ್ಲಿ ಹೋಗಿ ಭೇಟಿ ಮಾಡಿ ಆಗ್ರಹಿಸಿ ಗಮನ ಸೆಳೆದಿದ್ದಾಗಿ ಹೇಳಿದ್ದಾರೆ. ತಮ್ಮ ನಿರಂತರ ಫಾಲೋ ಅಪ್ ಹಾಗೂ ಊರವರ ಆಸಕ್ತಿ ಮತ್ತು ಶಿಕ್ಷಣ ಸಚಿವರ ಕಾಳಜಿಯಿಂದಾಗಿ ಅಂಕಲಗಾ ಪಪೂ ಕಾಲೇಜು ಹೊಂದಿದೆ. ಇದರಿಂದ ತಮಗಂತೂ ತುಂಬ ಸಂತಸವಾಗಿದೆ ಎಂದಿದ್ದಾರೆ.

ಅಂಕಲಗಾ ಹಾಗೂ ಸುತ್ತಲಿನ ಹಳ್ಳಿಗಳು ಗಡಿ ಗ್ರಾಮಗಳಾಗಿವೆ. ಈ ಭಾಗದಲ್ಲಿ ಶಿಕ್ಷಣ ಪ್ರಗತಿಯಾಗಬೇಕಾದಲ್ಲಿ ಇಂತಹ ಉಪಕ್ರಮಗಳಿಂದಲೇ ಸಾಧ್ಯ. ಈ ಗ್ರಾಮದ ಸುತ್ತಲಿನ ಹಳ್ಳಿಗಳ ಮಕ್ಕಳಿಗೂ ಈ ಕಾಲೇಜು ಅನುಕೂಲವಾಗಲಿದೆ. 2022- 23 ನೇ ಸಾಲಿನಲ್ಲಿ ಹೊಸ ಕಾಲೇಜು ಆರಂಭಿಸುವ ಯೋಜನೆಯಲ್ಲಿ ಅಂಕಲಗಾ ಕಾಲೇಜು ಸೇರ್ಪಡೆಯಾಗಿದೆ.

ಬರುವ ದಿನಗಳಲ್ಲಿ ಅಂಕಲಗಾ ಹಾಗೂ ಸುತ್ತಲಿನ ಗ್ರಾಮಗಳ ಯುವಕ- ಯುವತಿಯರಿಗೆ ಮನೆ ಬಲಿಯೇ ಕಾಲೇಜು ಸವಲತ್ತು ದೊರಕಿದಂತಾಗಿದೆ. ತಮ್ಮ ಸತತ ಬೇಡಿಕೆ ಹಾಗೂ ಮನವಿಗೆ ಸ್ಪಂದಿಸಿ ಶಿಕ್ಷಣ ಸಚಿವ ಬಿಸಿ ನಾಗೇಶರು ಕಾಲೇಜು ಮಂಜೂರು ಮಾಡಿದ್ದಾರೆ. ಅವರಿಗೆ ಅಭಿನಂದಿಸುವುದಾಗಿ ಎಂದು ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.