ಅಂಕಗಳೊಂದಿಗೆ ಮಾನವೀಯ ಮೌಲ್ಯಗಳು ಬಿತ್ತುತ್ತಿರುವ ಸರ್ವಜ್ಞ ಶಿಕ್ಷಣ ಸಂಸ್ಥೆ:ಶರಣಬಸಪ್ಪಗೌಡ ದರ್ಶನಾಪುರ

ಕಲಬುರಗಿ:ಫೆ.12: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಚಿಣ್ಣರ ಲೋಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ “ವಾರ್ಷಿಕ ಸ್ನೇಹ ಸಮ್ಮೇಳನ–2024” ಕಾರ್ಯಕ್ರಮವನ್ನು ಉದ್ಘಾಟಿಸಿದ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರು ಕರ್ನಾಟಕ ಸರ್ಕಾರ ಇವರು ಮಾನಾಡುತ್ತ, ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಿಗೆ ವಿಶೇಷ ಕಾಳಜಿ ಮಾಡುವ ಸಂಸ್ಥೆಯಾಗಿದೆ ಎಂದರು.

ಶಿಕ್ಷಣ ಸಂಸ್ಥೆ ಕಟ್ಟುವದು ಮತ್ತು ಅದನ್ನು ನಡೆಸುವದು ಕಷ್ಟದ ಕೆಲಸ, ಆದರೆ ಸಂಸ್ಥೆಯವರು ಕಷ್ಟಪಟ್ಟು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಟ್ಟು ಯಶಸ್ವಿಯಾಗಿ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ ಎಂದರು. ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಸಾಕಷ್ಟು ಕನ್ನಡ ಮಾಧ್ಯಮದ, ಗ್ರಾಮೀಣ ಭಾಗದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಸತಿ ಸಹಿತ ಉಚಿತ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿರುವುದು ನಿಜಕ್ಕೂ ಸಂತೋಷದ ವಿಷಯ ಎಂದರು. ಇನ್ನೂ ಈ ಸಂಸ್ಥೆಗೆ ಹೆಚ್ಚಿನ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದು ಹಾರೈಸಿದರು. ಮಕ್ಕಳು ಕೂಡ ಪರಿಶ್ರಮದಿಂದ, ಶಿಸ್ತಿನಿಂದ ಓದಿ ಪಾಲಕರಿಗೆ, ಸಂಸ್ಥೆಗೆ ಕೀರ್ತಿ ತರುವಂತಾಗಬೇಕು ಎಂದು ಸಲಹೆ ನೀಡಿದರು. ಇಲ್ಲಿಯ ಒಳ್ಳೆಯ ವಾತಾವರಣ, ಒಳ್ಳೆಯ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಉತ್ತಮ ಜ್ಞಾನ ಪಡೆದು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ನಾಡೋಜ ಡಾ.ಪಿ.ಎಸ್.ಶಂಕರ ಖ್ಯಾತ ವೈದ್ಯ ಸಾಹಿತಿ ಕಲಬುರಗಿ ಅವರು ಮಾತನಾಡುತ್ತ, ಕಲಬುರಗಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿವಿಧ ವೈದ್ಯರಿದ್ದಾರೆ, ಅವರಿಗೆ ಎಲ್ಲಿಂದ ರೋಗಿಗಳು ಬರಬೇಕು? ಎನ್ನುತ್ತಾ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಇಂತಹ ಉತ್ತಮ ಸಂಸ್ಥೆಗಳಿವೆ. ಇವುಗಳನ್ನು ಬಿಟ್ಟು ಕೋಟಾದಂತಹ ಮಂಗಳೂರಿನಂತಹ ಕೋಚಿಂಗ್ ಸೆಂಟರ್‍ಗೆ ಹೋಗಿ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆಂದರು. ಉತ್ತಮ ಬದುಕಿಗೆ ಅನೇಕ ಕೋರ್ಸಗಳಿವೆ. ಬರೀ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸಗಳಿಗೆ ಗಂಟುಬಿದ್ದು ಹಣ, ಆರೋಗ್ಯ, ಸಮಯ ಹಾಳುಮಾಡಿಕೊಳ್ಳದೆ ನಿಮ್ಮ ಸಾಮಥ್ರ್ಯ ಮತ್ತು ಆಸಕ್ತಿಗನುಗುಣವಾಗಿ ಪರಿಶ್ರಮ ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜಗತ್ತಿನ ಶ್ರೇಷ್ಠ ಸಾಧಕರು ಅವರವರ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಜಗತ್ತಿನ ನೋಬೆಲ್ ಪುರಸ್ಕøತರು ಹಾಗೂ ಶ್ರೇಷ್ಠ ವಿಜ್ಞಾನಿಗಳ ಹೆಸರನ್ನು ಹೇಳಿ ಎಲ್ಲ ವಿದ್ಯಾರ್ಥಿಗಳ ಚಪ್ಪಾಳೆ ಗಿಟ್ಟಿಸಿದರು. ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಅರ್ದದಷ್ಟು ಕನ್ನಡ ಮಾಧ್ಯಮದ ಹಾಗೂ ಗ್ರಾಮೀಣ ಮಕ್ಕಳು ಇರುವದು ಸಂತೋಷದ ಸಂಗತಿ ಎಂದರು. ಕನ್ನಡ ಭಾಷೆಯನ್ನು ಬಳಸಿ, ಬೆಳೆಸ ಬೇಕಾಗಿದೆ ಎಂದರು. ಕನ್ನಡದ ಶ್ರೇಷ್ಠ ಕವಿ ಸರ್ವಜ್ಞನ ವಚನಗಳ ಮೇಲೆ ವಿಚಾರ ಸಂಕೀರ್ಣಗಳನ್ನು ಏರ್ಪಡಿಸಿ ಎಂದು ಕಿವಿ ಮಾತು ಹೇಳಿದರು.
ಪ್ರೊ. ಚೆನ್ನಾರಡ್ಡಿ ಪಾಟೀಲ ಸಂಸ್ಥಾಪಕರು ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ ಅವರು ವಂದಿಸಿದರು. ಶ್ರೀಮತಿ ಸಂಗೀತಾ ಪಾಟೀಲ ನಿರ್ದೇಶಕರು ಸರ್ವಜ್ಞ ಚಿಣ್ಣರ ಲೋಕ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. 
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾದ ಸನ್ಮಾನ್ಯ ಶ್ರೀ ಎಸ್.ಎಂ.ರಡ್ಡಿ ಜಿಲ್ಲಾ ನ್ಯಾಯಾಧೀಶರು (ನಿವೃತ್ತ) ಹಾಗೂ ಅಧ್ಯಕ್ಷರು ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಶನ್,  ಶ್ರೀಮತಿ ಗೀತಾ ಚನ್ನಾರಡ್ಡಿ ಪಾಟೀಲ ಅಧ್ಯಕ್ಷರು ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ, ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಮುಖ್ಯ ಶೈಕ್ಷಣಿಕ ನಿರ್ದೇಶಕರು ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ, ಶ್ರೀ ಎಂ.ಸಿ.ಕಿರೇದಳ್ಳಿ ಪ್ರಾಂಶುಪಾಲರು ಸರ್ವಜ್ಞ ಕಾಲೇಜು ಕಲಬುರಗಿ, ಶ್ರೀ ಪ್ರಭುಗೌಡ ಸಿದ್ಧಾರಡ್ಡಿ ಸರ್ವಜ್ಞ ಪದವಿ ಕಾಲೇಜು, ಶ್ರೀ ವಿಜಯಕುಮಾರ ನಾಲವಾರ ಪ್ರಾಂಶುಪಾಲರು ಸರ್ವಜ್ಞ ಚಿಣ್ಣರ ಲೋಕ, ಶ್ರೀ ಸಿದ್ರಾಮಪ್ಪಗೌಡ, ಶ್ರೀ ಅಯ್ಯಣ್ಣಗೌಡ ಪಾಟೀಲ, ಡಾ. ಬಸವರಾಜ ಪಾಟೀಲ, ಶ್ರೀ ಕರುಣೇಶ್ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು. ಪಾಲಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲರ ಮನರಂಜಿಸಿದವು.