ʻ17,000 ಕೊಳವೆ ಬಾವಿ ನಿರ್ಮಾಣಕ್ಕೆ ನೇರ ಹಣ ಪಾವತಿʼ 

ಉಡುಪಿ, ನ.1೯- ಪ.ಜಾತಿ ಮತು ಪಂಗಡದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು 2022-23ನೇ ಸಾಲು ಸೇರಿದಂತೆ ಬಾಕಿ ಉಳಿದ ಹಿಂದಿನ ಸಾಲಿನಲ್ಲಿ ಆಯ್ಕೆಯಾದ ಒಟ್ಟು 17,000ಕ್ಕೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 1,115 ಕೋಟಿ ರೂ.ಗಳನ್ನು ವರ್ಗಾವಣೆಗೊಳಿಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಡಿಬಿಟಿ ತಂತ್ರಾಂಶವನ್ನು ಇಲಾಖೆ ವತಿಯಿಂದ ಸಿದ್ಧಪಡಿಸಿ ಇ-ರೂಪಿ ಮೂಲಕ ಪಾವತಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅನಾರೋಗ್ಯದ ಕಾರಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಚಿವರು, ಅಲ್ಲಿಂದಲೇ  ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಕುರಿತಂತೆ ವೀಡಿಯೋ ಕಾನ್ಫ್‌ರೆನ್ಸ್ ಮೂಲಕ ನಡೆಸಿದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ 7 ವಿವಿಧ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 17,000 ಕೊಳವೆ ಬಾವಿಗಳನ್ನು ಕೊರೆಯಲು ಹಣವನ್ನು ರೈತರ ಖಾತೆಗೆ  ನೇರವಾಗಿ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು. ಫಲಾನುಭವಿಗಳು ಇಲಾಖೆ ವತಿಯಿಂದ ನೊಂದಾಯಿತ ಸಂಸ್ಥೆಗಳ ಮೂಲಕ ಕೊಳವೆ ಬಾವಿಗಳನ್ನು ಕೊರೆಸಲು ಹಾಗೂ ತಮಗೆ ಅನುಕೂಲವಾಗುವ ಪಂಪ್‌ಸೆಟ್‌ಗಳನ್ನು ಖರೀದಿ ಮಾಡಬಹುದಾಗಿದ್ದು, ಇದರಿಂದ ಯೋಜನೆಯ ಅನುಷ್ಠಾನದಲ್ಲಿ ಆಗುವ ವಿಳಂಬವನ್ನು ತಡೆಯಲು ಹಾಗೂ ಪಾರದರ್ಶಕತೆಗೆ ಒತ್ತು ನೀಡಿದಂತಾಗುತ್ತದೆ ಎಂದರು. ಈಗಾಗಲೇ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲೆಗೆ ವರ್ಗಾಯಿಸಲಾ ಗಿದ್ದು, ಸಮಿತಿ ಅರ್ಹ ಫಲಾನುಭವಿಗಳನ್ನು ನವೆಂಬರ್ ಆಂತ್ಯದ ಒಳಗೆ ಆಯ್ಕೆ ಮಾಡಲಿದೆ ಎಂದರು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಳಗಾವಿ, ಕಲಬರುಗಿ, ಧಾರವಾಡ, ದ.ಕನ್ನಡ, ಮೈಸೂರು ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಿದೆ. ವಿದ್ಯಾರ್ಥಿ ನಿಲಯಗಳ ಕೊರತೆ ಹಿನ್ನಲೆಯಲ್ಲಿ ದೀನದಯಾಳ್ ಉಪಾಧ್ಯಾಯ ಸೌಹಾರ್ದತಾ ವಿದ್ಯಾರ್ಥಿ ನಿಲಯಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ. ಇವುಗಳಿಗೆ ಪ.ಜಾತಿ., ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗ ಒಳಗೊಂಡಂತೆ ಎಲ್ಲಾ ಸಮುದಾಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಅಗತ್ಯವಿರುವ ಸ್ವಂತ ಕಟ್ಟಡವನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದರು. ಪ.ಜಾತಿ ಮತ್ತು ಪಂಗಡದ ಮಠಗಳ ಅಭಿವೃಧ್ದಿಗೆ ಮುಖ್ಯಮಂತ್ರಿಗಳು ಈಗಾಗಲೇ ವಿಶೇಷ ನೆರವನ್ನು ಘೋಷಿಸಿದ್ದು, ರಾಜ್ಯದ 12 ಮಠಗಳಿಗೆ 22 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಇಲಾಖೆ ವ್ಯಾಪ್ತಿಯ ವಿವಿಧ ಅಭಿವೃಧ್ದಿ ನಿಗಮಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಸಕ್ತ ಆಯವ್ಯಯದಲ್ಲಿ 580 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ 410 ಕೋಟಿ ಅನುದಾನ ವನ್ನು ಒದಗಿಸಲಾಗಿದೆ. ಒಟ್ಟಾರೆ 990 ಕೋಟಿ ರೂ ನೀಡಲಾಗಿದೆ ಎಂದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತ ರಾಕೇಶ್, ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ ಆಯುಕ್ತ ದಯಾನಂದ್ ಹಾಗೂ 7 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.