ʻಹೊರ ರಾಜ್ಯಗಳಿಂದ ಕುಚ್ಚಲು ಅಕ್ಕಿ ಖರೀದಿಸಿ ವಿತರಣೆಗೆ ಕ್ರಮʼ

ಮಂಗಳೂರು, ಜು.೨೦- ಮುಂದಿನ ಅಕ್ಟೋಬರ್ ತಿಂಗಳ ಬಳಿಕ ಹೊರ ರಾಜ್ಯಗಳಿಂದ ಕುಚ್ಚಲು ಅಕ್ಕಿ ಖರೀದಿಸಿ ಪ್ರಥಮ ಹಂತದಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಕುಚ್ಚಲು ಅಕ್ಕಿ ವಿತರಣೆ ಸಾಧ್ಯತೆ ಇದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ನಿನ್ನೆ ನಗರದ ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿ ಗಾರರನ್ನುದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಪಡಿತರದ ಮೂಲಕ ಕುಚ್ಚಲು ಅಕ್ಕಿ ವಿತರಿಸಬೇಕಾದರೆ 18 ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಇತರ ರಾಜ್ಯಗಳಿಂದ ಖರೀದಿಸಬೇಕಾಗಿದೆ. ವಿವಿಧ ಕಡೆಗಳಿಂದ ಖರೀದಿಸಿ ಸಂಸ್ಕರಿಸಲು ಕೇಂದ್ರ ಸರಕಾರದ ಅನುಮತಿ ದೊರೆತಿದೆ. ಕೇರಳಕ್ಕೆ ಒಂದು ತಂಡ ತೆರಳಿ ಅಲ್ಲಿನ ಬೆಂಬಲ ಬೆಲೆಯ ವಿತರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಮುಂದೆ ತೆಲಂಗಾಣಕ್ಕೆ ತೆರಳಿ ಅಲ್ಲಿಂದ ಅಕ್ಕಿ ಖರೀದಿಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಿದೆ. ಛತ್ತೀಸ್ಗಡದಿಂದಲೂ ಅಕ್ಕಿ ಖರೀದಿಯ ಬಗ್ಗೆ ಚಿಂತನೆ ಇದೆ. ಈ ಯೋಜನೆಗೆ ಸುಮಾರು 125 ಕೋಟಿ ರೂಪಾಯಿ ರಾಜ್ಯ ಸರಕಾರ ಸಬ್ಸಿಡಿ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಶಾಸಕ ಸಂಸದರ ಸಭೆಯನ್ನು ಆಗಸ್ಟ್ 2ನೆ ವಾರ ನಡೆಸಲಾಗುವುದು ಎಂದು ಸಚಿವ ಶ್ರೀ ನಿವಾಸ ಪೂಜಾರಿ ತಿಳಿಸಿದ್ದಾರೆ.