ʻಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕುʼ

ಉಡುಪಿ, ಸೆ.1೬- ಸ್ವಾತಂತ್ರ್ಯ ದೊರೆತು 75 ವರ್ಷ ಆಚರಿಸುತ್ತಿರುವ ಸಂದರ್ಭದಲ್ಲೂ ಬೇಟಿ ಬಚಾವೋ, ಬೇಟಿ ಪಡಾವೋ ಹೇಳುವ ವ್ಯವಸ್ಥೆ ಇರಲೇ ಬಾರದು. ಹೆಣ್ಣು ಮಕ್ಕಳ ಮೇಲಿನ ಶೋಷಣೆ ಹಾಗೂ ಹೆಣ್ಣು ಮಕ್ಕಳು ಬೇಡ ಹೇಳುವುದು ಸಲ್ಲದಂತಹ ವಿಚಾರವಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಸಾಧನೆಯ ಸಂಭ್ರಮಾಚರಣೆಗಾಗಿ ದೇಶದ 75 ನಗರಗಳಲ್ಲಿ ಉಡುಪಿ ನಗರ ಆಯ್ಕೆಯಾದ ಪ್ರಯುಕ್ತ ಭಾರತೀಯ ಅಂಚೆ ಇಲಾಖೆ ಉಡುಪಿ ಅಂಚೆ ವಿಭಾಗದ ವತಿಯಿಂದ ಗುರುವಾರ ಉಡುಪಿ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾದ ಸುಕನ್ಯಾ ಸಮೃದ್ಧಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಂದು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳೇ ಮುಂದೆ ಇದ್ದಾರೆ. ರಾಜಕೀಯವಾಗಿ ಹೆಣ್ಣು ಮಕ್ಕಳಿಗೂ ಮೀಸಲಾತಿ ಸಿಗಬೇಕಾಗಿದೆ. ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳೆಯರಿಗೆ ಈಗಾಗಲೇ ಮೀಸಲಾತಿ ದೊರೆತಿದ್ದು, ಸ್ಥಳೀಯ ಮಟ್ಟದಲ್ಲಿ ಮಹಿಳೆಯರೇ ಆಡಳಿತ ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಾಗಿದೆ. ಪುರುಷ ಮತ್ತು ಮಹಿಳೆಯರ ಮಧ್ಯೆ ಸಮಾನತೆ ಇದ್ದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಬೆಂಗಳೂರು ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ವೀಣಾ ವಿವೇಕಾನಂದ ಹಾಗೂ ರೋಟರಿ ಕ್ಲಬ್ ಉಡುಪಿ ರೋಯಲ್ ಅಧ್ಯಕ್ಷ ಬಾಲಕೃಷ್ಣ ಮದ್ದೋಡಿ ಅವರನ್ನು ಸನ್ಮಾನಿಸ ಲಾಯಿತು. ಹೊಸ ಸುಕನ್ಯಾ ಖಾತೆಗಳನ್ನು ತೆರೆದ ಹೆಣ್ಣು ಮಕ್ಕಳಿಗೆ/ಪೋಷಕರಿಗೆ ಪಾಸ್ ಪುಸ್ತಕಗಳನ್ನು ವಿತರಿಸಲಾಯಿತು. ಅಂಚೆ ಅಧೀಕ್ಷಕ ನವೀನ್ ಚಂದರ್ ಸ್ವಾಗತಿಸಿದರು. ಉಡುಪಿ ದಕ್ಷಿಣ ಅಂಚೆ ಉಪ ವಿಭಾಗದ ಮುಖ್ಯಸ್ಥ ನವೀನ್ ವಿ.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಪ್ರಧಾನ ಅಂಚೆ ಪಾಲಕ ಗುರುಪ್ರಸಾದ್ ವಂದಿಸಿದರು. ಭಾರತಿ ನಾಯಕ್ ಹಾಗೂ ಪ್ರವೀಣ್ ಜತ್ತನ್ನ ಕಾರ್ಯಕ್ರಮ ನಿರೂಪಿಸಿದರು.