ʻಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ವಸೂಲಿ ಮಾಡಿದರೆ ಹೋರಾಟʼ 

ಮಂಗಳೂರು, ನ.೨೨- ಈಗಾಗಲೇ ಭೂಸಾರಿಗೆ ಇಲಾಖೆಯ ಅಧಿಸೂಚನೆಯಲ್ಲಿ ಸುರತ್ಕಲ್‌ನಲ್ಲಿ ರದ್ದುಪಡಿಸುವ ಟೋಲ್‌ನ ಸಂಗ್ರಹವನ್ನು ಹೆಜಮಾಡಿಯಲ್ಲಿ ಮಾಡುವುದಾಗಿ ತಿಳಿಸಲಾಗಿದೆ. ಸುರತ್ಕಲ್ ಟೋಲ್‌ಗೇಟ್ ರದ್ದುಪಡಿಸಿದ ಬಳಿಕ ಹೆಜಮಾಡಿಯಲ್ಲಿ  ಹೆಚ್ಚುವರಿ ಟೋಲ್ ವಸೂಲಿ ಮಾಡಿದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಹೇಳಿದದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜನರಿಗೆ ಮಾಡುವ ಅನ್ಯಾಯವಾಗಿದ್ದು ಇದನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಸುರತ್ಕಲ್ ಟೋಲ್ ರದ್ದುಪಡಿಸಿ ಅಧಿಸೂಚನೆ ಹೊರಡಿಸಿ ೧೦ ದಿನಗಳಾಗಿವೆ. ಆದರೆ ಇದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಯವರು ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲಿ ಈಗಲೂ ಅಕ್ರಮವಾಗಿ ದಿನವೊಂದಕ್ಕೆ ಸುಮಾರು ೧೧ ಲಕ್ಷ ರೂ.ಅಧಿಕ ಸುಂಕ ವಸೂಲಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಯವರು ಕೂಡಲೇ ಕ್ರಮಕೈಗೊಂಡು ಟೋಲ್‌ಗೇಟ್‌ನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಯವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಐವನ್ ಡಿಸೋಜ ಅವರು ಹೇಳಿದರು. ಸುರತ್ಕಲ್‌ನಲ್ಲಿ ಅಕ್ರಮ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಕಳೆದ ೨೫ ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಭಾಗದ ಶಾಸಕರು, ಸಂಸದರು ಅಲ್ಲಿಗೆ ಭೇಟಿ ನೀಡಿಲ್ಲ. ಟೋಲ್ ರದ್ದಾಗಿದ್ದು ಇದಕ್ಕಾಗಿ ಪ್ರಧಾನಿಯವರಿಗೆ ಹಾಗೂ ಭೂಸಾರಿಗೆ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಇಲ್ಲಿನ ಸಂಸದರು ಟ್ವೀಟ್ ಮಾಡಿದ್ದಾರೆ. ಆದರೆ ಟೋಲ್‌ಗೇಟ್ ತೆರವು ಆಗದೆ ಹಾಗೆಯೇ ಮುಂದುವರಿದಿದೆ ಎಂದ ಅವರು ಕೂಡಲೇ ತೆರವುಗೊಳಿಸಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಹಾಲಿಗೆ ಪ್ರತಿಲೀಟರ್‌ಗೆ ೩ ರೂ. ಹೆಚ್ಚಳ ಮಾಡುವ ಪ್ರಸ್ತಾವವನ್ನು ಸರಕಾರ ಕೂಡಲೇ ಕೈಬಿಡಬೇಕು. ಹಾಲು ಒಕ್ಕೂಟಗಳು ಬೇಡಿಕೆ ಇಟ್ಟಿರುವ ೩ ರೂ.ಹೆಚ್ಚಳವನ್ನು ಸರಕಾರವೇ ಭರಿಸಿ ಅವರಿಗೆ ನೀಡಬೇಕು. ದರ ಹೆಚ್ಚಳ ಮಾಡಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಐವನ್ ಡಿಸೋಜ ತಿಳಿಸಿದರು. ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಸಬಿತಾ ಮಿಸ್ಕಿತ್, ಚಿತ್ತರಂಜನ್ ಶೆಟ್ಟಿ, ಭಾಸ್ಕರ ರಾವ್, ಶಬ್ಬೀರ್ ಸಿದ್ಧಕಟ್ಟೆ, ನಜೀರ್ ಬಜಾಲ್, ಸಲೀಂ ಮೀನ್ ಟೆಲ್ಲಿಸ್, ಹಬೀಬುಲ್ಲಾ ಉಪಸ್ಥಿತರಿದ್ದರು.