ʻಹಕ್ಕುಗಳ ಅನುಷ್ಠಾನದ ಮೂಲಕ ಕರ್ತವ್ಯ ಪಾಲಿಸಲು ಮುಂದಾಗಿʼ 

ಮಂಗಳೂರು, ನ.೧೪- ಸಂವಿಧಾನದ ಮೂಲಕ ಹಕ್ಕು ಗಳಿಸಿಕೊಂಡರೆ ಸಾಲದು. ಎಲ್ಲಾ ಕ್ಷೇತ್ರಗಳಲ್ಲೂ ಅದರ ಬಳಕೆ ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ದುಡಿಯುವ ಅಗತ್ಯವಿದೆ ಎಂದು ಬಂದರು ಹಾಗೂ ಮೀನುಗಾರಿಕ ಸಚಿವ ಎಸ್.ಅಂಗಾರ ಹೇಳಿದರು.

ಬಿಜೆಪಿ ದ.ಕ.ಜಿಲ್ಲಾ ಎಸ್ಸಿ ಮೋರ್ಚಾದ ವತಿಯಿಂದ ರವಿವಾರ ನಗರದ ಉರ್ವಸ್ಟೋರ್‌ನ ಅಂಬೇಡ್ಕರ್ ಭವನ ದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶ, ಪುಸ್ತಕ ಬಿಡುಗಡೆ, ಅಂಬೇಡ್ಕರ್ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಹಕ್ಕುಗಳನ್ನು ನಾವೀಗ ಅನುಭವಿಸುತ್ತಿದ್ದೇವೆ. ಆದರೆ ಅದರ ಮಹತ್ವ ನಮಗೆ ಇನ್ನೂ ಅರಿವಿಗೆ ಬಂದಿಲ್ಲ. ಇತಿಹಾಸವನ್ನು ಅರಿತುಕೊಂಡು ಹಕ್ಕುಗಳ ಅನುಷ್ಠಾನದ ಮೂಲಕ ಕರ್ತವ್ಯಗಳನ್ನು ಪಾಲಿಸಲು ಮುಂದಾಗಬೇಕು ಎಂದು ಸಚಿವ ಎಸ್.ಅಂಗಾರ ಹೇಳಿದರು. ಈ ಸಂದರ್ಭ ಕವಿ ದಿ.ಸಿದ್ಧಲಿಂಗಯ್ಯರ ನೆನಪಿಗಾಗಿ ರಚಿತವಾದ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಪರಿಶಿಷ್ಟ ಜಾತಿಯಲ್ಲಿರುವ ನಾನಾ ಉಪಜಾತಿಗಳಲ್ಲಿರುವ ಪ್ರತಿಭಾವಂತ ಸಾಧಕರನ್ನು ಗುರುತಿಸಿಕೊಂಡು ಸನ್ಮಾನಿಸಲಾಯಿತು. ಅಲ್ಲದೆ ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ, ಶಾಸಕರಾದ ನೆಹರು ಓಲೇಕಾರ್, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಶ್, ರಾಜ್ಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕೋಶಾಧಿಕಾರಿ ನಾಗೇಶ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಎಸ್ಸಿ  ಮೋರ್ಚಾದ ಪ್ರಭಾರಿ ಮಂಗಳಾ ಆಚಾರ್ಯ, ಬಿಜೆಪಿ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಭಾರಿ ಭಾರತೀಶ್, ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿನಯ ನೇತ್ರ ದಡ್ಡಲ್‌ ಕಾಡ್ ಸ್ವಾಗತಿಸಿದರು.