ʻಸಹಕಾರಿ ಕ್ಷೇತ್ರದಿಂದ ಗ್ರಾಮೀಣ ಜನರಿಗೆ ಆರ್ಥಿಕ ಸಂಕಲ್ಪʼ

ಮಂಗಳೂರು, ನ.1೯- ಕೊರೋನ ಸಂದರ್ಭದಲ್ಲೂ ಜಿಲ್ಲಾ ಸಹಕಾರಿ ಬ್ಯಾಂಕ್, ಕೆಎಂಎಫ್ ಹಾಗೂ ಕ್ಯಾಂಪ್ಕೋದಂಥ ಸಹಕಾರಿ ಕ್ಷೇತ್ರಗಳು ಗ್ರಾಮೀಣ ಜನರ ಬದುಕಿಗೆ ಆರ್ಥಿಕ ಸಂಕಲ್ಪ ನೀಡುವಲ್ಲಿ ಸಹಕಾರಿಯಾಗಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಕುಲಶೇಖರದ ಕೆಎಂಎಫ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಂದಿನಿ ಅನ್ ವೀಲ್ಸ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊರೋನದಿಂದಾಗಿ ಹೊರ ದೇಶಗಳಿಂದ ಅಡಿಕೆ ಆಮದಿಗೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗಿ ರೈತರಿಗೆ ಸಹಕಾರಿಯಾ ಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಆರು ತಿಂಗಳು ಸಾಲ ಮರುಪಾವತಿ ಅವಧಿಯ ವಿಸ್ತರಣೆಯ ಸಂದರ್ಭದ ಚಕ್ರಬಡ್ಡಿಯನ್ನು ಕೇಂದ್ರ ಸರಕಾರ ಭರಿಸಿದ್ದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೂ ಹೆಚ್ಚಿನ ಹೊರೆ ಬಿದ್ದಿಲ್ಲ. ಆದರೆ ಕೊರೋನದಿಂದಾಗಿ ಕೆಲ ಸಮಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ವಿತರಿಸಲು ಸಾಧ್ಯವಾಗದೆ ಕೆಎಂಎಫ್ ನಷ್ಟ ಅನುಭವಿಸಬೇಕಾಯಿತಾದರೂ, ಈಗ ಚೇತರಿಸಿಕೊಳ್ಳುತ್ತಿದೆ. ಹಾಗಾಗಿ ಗ್ರಾಮಾಂತರ ಸೊಸೈಟಿಗೆ ಹಾಲು ಹಾಕುವವರ ಬಗ್ಗೆ ಚಿಂತಿಸಿ ಮುಂದಿನ ಜನವರಿಯಿಂದಲಾದರೂ ಅವರಿಗೆ ಹಿಂದಿನ ಧಾರಣೆ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉತ್ತಮ ಡೀಲರುಗಳಿಗೆ ಗೌರವ ಹಾಗೂ ಹಾಲು ಉತ್ಪಾದಕರ ಮತ್ತು ಡೀಲರುಗಳ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ಪುರುಷೋತ್ತಮ ಹಾಗೂ ಒಕ್ಕೂಟದ ನಿರ್ದೇಶಕರು ಉಪಸ್ಥಿತರಿದ್ದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆನೆಟ್ ರೊಸಾರಿಯೊ ಕಾರ್ಯಕ್ರಮ ನಿರೂಪಿಸಿದರು.