ʻಸರ್ಕಾರದ ಯೋಜನೆಗಳು ಗ್ರಾಮ ಮಟ್ಟದಲ್ಲಿ ಅನುಷ್ಟಾನ ಆಗಬೇಕುʼ

ಸುಳ್ಯ, ಜೂ.೨೩- ಸರಕಾರದ ಯೋಜನೆಗಳು ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಿಗೆ ಸೀಮಿತ ಅಲ್ಲ, ಸರಕಾರದ ಯೋಜನೆಗಳ ಘೋಷಣೆಗಳು ಪುಸ್ತಕದಲ್ಲಿ ಮಾತ್ರ ಇದ್ದರೆ ಸಾಲದು ಅದು ಗ್ರಾಮ ಮಟ್ಟದಲ್ಲಿ ಅನುಷ್ಠಾನ ಆಗಬೇಕು. ಆ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ದಿ ಮಾಡುವುದು ಸರಕಾರದ ಕಲ್ಪನೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಇಂಧನ ಸಚಿವರು ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್‍ ಕುಮಾರ್ ಹೇಳಿದ್ದಾರೆ.
ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸರಕಾರಿ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ಸವಲತ್ತುಗಳ ವಿತರಣೆ ನಿರಂತರ ಪ್ರಕ್ರಿಯೆ ಇದು ಜನರ ಮನೆ ಬಾಗಿಲಿಗೆ ತಲುಪಿಸಲು ಹಲವಾರು ಯೋಜನೆಗಳನ್ನು ರೂಪಿಸಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಪರಿಹರಿಸಲು ಸರಕಾರ ನಿರ್ಧರಿಸಿದೆ. ಸುಳ್ಯ ತಾಲೂಕಿನಲ್ಲಿ 23 ಸಾವಿರ ಹೆಕ್ಟೇರ್‍ಗಲ್ಲಿ 16 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಭೂಮಿಯನ್ನು ಕೈಬಿಟ್ಟು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿ ಅದನ್ನು ಕೃಷಿಕರಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಮುಟ್ಟುವ ನೆಲೆಯಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಮೂಲಕ ಸರಕಾರವೇ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸುತಿದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಭೂ ದಾಖಲೆಗಳ ಉಪನಿರ್ದೇಶಕ ನಿರಂಜನ್, ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್, ಡಿವೈಎಸ್‍ಪಿ ಗಾನ ಪಿ.ಕುಮಾರ್, ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸುಳ್ಯ ತಹಸೀಲ್ದಾರ್ ಅನಿತಾಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ ಸ್ವಾಗತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಎಂ.ಆರ್.ವಂದಿಸಿದರು. ಗ್ರಾಮ ಕರಣಿಕರಾದ ತಿಪ್ಪೇಶಪ್ಪ ಕಾರ್ಯಕ್ರಮ ನಿರೂಪಿಸಿದರು.