ʻವಿಮಾನ ನಿಲ್ದಾಣದ ಹೆಸರು ಬದಲಿಸದಿದ್ದರೆ ಹೋರಾಟʼ

ಮಂಗಳೂರು, ನ.೨೨- ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ‘ಅದಾನಿ ಏರ್‌ಪೋರ್ಟ್ಸ್’ ಎಂದು ಬರೆಯಲಾಗಿದ್ದು, ಇದನ್ನು ಕೂಡಲೇ ತೆಗೆಯದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ದಿಲ್‌ರಾಜ್ ಆಳ್ವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಹಸ್ತಾಂತರಿಸಿದ ಕೂಡಲೇ ಹೆಸರನ್ನು ಬದಲಾಯಿಸಬೇಕೆಂದಿಲ್ಲ, ಮಾಜಿ ಸಂಸದ ಶ್ರೀನಿವಾಸ್ ಮಲ್ಯರ ಕೊಡುಗೆ, ಕರಾವಳಿ ಜಿಲ್ಲೆಯ ಜನರ ತ್ಯಾಗದ ಸಂಕೇತವಾಗಿರುವ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲಾಗಿದೆ. ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ಮಾರಾಟ ಮಾಡಿಲ್ಲ, ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಖಾಸಗೀಕರಣ ನೆಪದಲ್ಲಿ ಅದಾನಿ ಸಂಸ್ಥೆಯು ತುಳುನಾಡ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಸಮಾನ ಮನಸ್ಕರನ್ನು ಒಂದೇ ವೇದಿಕೆಯಡಿ ತಂದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣ ಹಸ್ತಾಂತರ ವೇಳೆ ಮಂಗಳೂರು ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ನಿರ್ಲಕ್ಷಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳ ವಿರುದ್ಧ ತುಳುನಾಡಿನ ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯೇತರ ಸಂಘಟನೆಗಳು ನಮ್ಮ ಜಿಲ್ಲೆಯ ಹಿತರಕ್ಷಣೆ ಗಮನದಲ್ಲಿಸಿರಿಸಿಕೊಂಡು ಕೆಲವು ಬೇಡಿಕೆಗಳನ್ನು ಅದಾನಿ ಕಂಪೆನಿಗೆ ಸಲ್ಲಿಸುತ್ತೇವೆ.

ಇನ್ನು ಇದರ ವಿರುದ್ಧ ಸಾಮಾಜಿಕ ಜಾಲತಾಣ ಮೂಲಕ ಅಭಿಯಾನ ಆರಂಭಿಸಿರುವ ನಾವು ಇದೀಗ ಮಾಧ್ಯಮದ ಮೂಲಕ ಬೇಡಿಕೆ ಸಲ್ಲಿಸುತ್ತಿದ್ದೇವೆ. ಮುಂದೆ ಸಂಸದರು, ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಅದಾನಿ ಸಂಸ್ಥೆಯ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಉಮಾನಾಥ್ ಕೋಟೆಕಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.