ʻಪತ್ರಕರ್ತರ ಸಂಘದಿಂದ ಸಮಾಜಮುಖಿ ಕಾರ್ಯʼ

ಮಂಗಳೂರು, ಜು.೨೧- ಪತ್ರಕರ್ತರ ಸಂಘ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಸಂವಿಧಾನದ ಆಶೋತ್ತರದಂತೆ ದ.ಕ. ಜಿಲ್ಲಾ ಪತ್ರಕರ್ತರ ಸಂಘ ಕೆಲಸ ಮಾಡುತ್ತಿದೆ. ಆಡಳಿತ ಹಳಿತಪ್ಪಿದಾಗ ಕಿವಿ ಹಿಂಡುವ ಜತೆಗೆ ಅಭಿವೃದ್ಧಿ ಕಾರ್ಯಕ್ಕೆ ಪತ್ರಕರ್ತರು ಕೈಜೋಡಿಸುತ್ತಿದ್ದಾರೆ. ಪತ್ರಕರ್ತರ ಸಂಘ ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಕುತ್ಲೂರು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಳ್ತಂಗಡಿ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಕುತ್ಲೂರುವಿನಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಸರಕಾರಿ ಶಾಲೆಯ ಮಕ್ಕಳಿಗೆ ನಗರದ ಪತ್ರಿಕಾಭವನದಲ್ಲಿ ಬುಧವಾರ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳಿಗೆ ಸರಕಾರದಿಂದ ಶೀಘ್ರದಲ್ಲಿ ಸಮವಸ್ತ್ರ ದೊರೆಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಬ್ಯಾಂಕ್ ಆಫ್ ಬರೋಡಾ ಮಹಾ ಪ್ರಬಂಧಕಿ ಗಾಯತ್ರಿ ಆರ್., ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಕುತ್ಲೂರು ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮುಖ್ಯ ಅತಿಥಿಗಳಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಆಫ್ ಬರೋಡಾ ಸಿಎಸ್‌ಆರ್ ನಿಧಿಯಿಂದ 30 ಸಾವಿರ ರೂ. ವೆಚ್ಚದಲ್ಲಿ ಸಮವಸ್ತ್ರ ವಿತರಿಸಲಾಯಿತು. ಮಂಗಳೂರಿನ ಗಾಂಧಿನಗರ ಶಾಲಾ ಮಕ್ಕಳಿಗೆ ಕೆಐಒಸಿಎಲ್ ಪ್ರಾಯೋಜಕತ್ವದಲ್ಲಿ ಮಾಸ್ಕ್ ವಿತರಿಸಲಾಯಿತು.