ʻನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡಿರುವ ಆತ್ಮತೃಪ್ತಿ ಇದೆʼ

 

ಮಂಗಳೂರು, ಸೆ.೯- ಮಹಾ ನಗರ ಪಾಲಿಕೆಯ ಮೇಯರ್ ಹುದ್ದೆ ಸದ್ಯ ಒಂದು ವರ್ಷ ಅವಧಿಯಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಒಂದು ವರ್ಷದ ಅವಧಿ ಅತಿ ಕಡಿಮೆಯಾಗಿದೆ. ಈ ಅವಧಿ ವಿಸ್ತರಣೆಯ ಅಗತ್ಯವಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 23ನೆ ಅವಧಿಯ ಮೇಯರ್ ಸ್ಥಾನಕ್ಕಾಗಿ ಇಂದು (ಸೆ. 9) ಚುನಾವಣೆ ನಿಗದಿಯಾಗಿದ್ದು, 22ನೆ ಅವಧಿಯ ಮೇಯರ್ ಆಗಿರುವ ಪ್ರೇಮಾನಂದ ಶೆಟ್ಟಿಯವರ ನಿನ್ನೆಗೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಮೇಯರ್ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಿಕೇಂದ್ರೀಕರಣ ಬಲವರ್ದನೆ ಬಗ್ಗೆ 2022ರ ಜನವರಿ 4ರಂದು ಸಭೆ ನಡೆದಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಮಾತ್ರವಲ್ಲದೆ, ಭಕ್ತ ವತ್ಸಲ ಸಮಿತಿ ಸ್ಥಳೀಯ ಸಂಸ್ಥೆಗಳ ಮೇಯರ್ ಅವಧಿಯನ್ನು ಎರಡೂವರೆ ವರ್ಷಗಳ ಅವಧಿಗೆ ವಿಸ್ತರಿಸುವಂತೆ ಕೋರಿ ಶಿಫಾರಸ್ಸನ್ನು ಸರಕಾರಕ್ಕೆ ಕಳುಹಿಸಿದೆ. 2022ರ ಮಾರ್ಚ್ ಮಾ.2ರಂದು ಮೇಯರ್ ಚುನಾವಣೆ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ಚುನಾವಣೆ ಮಂದೂಡಲ್ಪಟ್ಟಿತ್ತು. ಇದರಿಂದಾಗಿ ಮೇಯರ್ ಆಗಿ ಎರಡು ಬೇಸಿಗೆ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ಜವಾಬ್ಧಾರಿ ನನ್ನದಾಗಿತ್ತು. ಎಪ್ರಿಲ್, ಮೇ ತಿಂಗಳಲ್ಲಿ ಸಹಜವಾಗಿ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ತಮ್ಮ ಅವಧಿಯಲ್ಲಿ ನೀರಿನ ಮೂಲದಲ್ಲಿ ಯಾವುದೇ ಕೊರತೆ ಆಗಿರಲಿಲ್ಲ. ಆದರೆ ನಗರದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಬೇಡಿಕೆ ಹೆಚ್ಚುತ್ತದೆ. ಅದನ್ನು ನಿವಾರಿಸುವ ಸವಾಲನ್ನು ಸಮರ್ಥವಾಗಿ ಎದುರಿಸಿರುವ ತೃಪ್ತಿ ಇದೆ. ಉದ್ಯಮ ಪರವಾನಿಗೆ ಸಂಬಂಧಿಸಿ ಸಾಕಷ್ಟು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಡಳಿತ ಸುಧಾರಣೆ ತರಲಾಗಿದೆ. ಇ ಖಾತಾಕ್ಕಾಗಿಯೂ ಹೊಸ ತಂತ್ರಜ್ಞಾನ ಅಳವಡಿಸಿ ಕಾಲ ಮಿತಿಯಲ್ಲಿ ಸಾರ್ವಜನಿಕರಿಗೆ ಖಾತಾ ನೀಡಲು ಕ್ರಮ ವಹಿಸಲಾಗಿದೆ. ರಸ್ತೆ ಅಗಲೀಕರಣ ಕಠಿಣ ಸವಾಲಾಗಿದ್ದು, ಜನರನ್ನು ಮನವೊಲಿಸಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ರಸ್ತೆಗಳನ್ನು ಅಗಲೀಕರಣಗೊಳಿಸಿ ವಾಹನ ಸಂಚಾರ, ಪಾದಚಾರಿಗಳಿಗಾಗಿ ಫುಟ್‌ಫಾತ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಷ್ಟ್ರೀಯ ನೀತಿ ತಂಡವು ನಗರಕ್ಕೆ ಆಗಮಿಸಿದ್ದ ವೇಳೆ ನಗರದ ರಸ್ತೆ, ಫುಟ್‌ಪಾತ್‌ಗಳನ್ನು ನೋಡಿ ಇತರ ನಗರಗಳಿಗೂ ಈ ಮಾದರಿಯನ್ನು ಅನುಸರಿಸುವ ಬಗ್ಗೆ ಚರ್ಚಿಸಿದೆ. ನಗರದ ಪ್ರಮುಖ ರಸ್ತೆಗಳನ್ನು ಮಾಸ್ಟರ್ ಪ್ಲಾನ್‌ನಂತೆ ಅಗಲೀಕರಣಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ನಗರ ಪಾಲಿಕೆಗೆ ಸ್ಮಾರ್ಟ್ ಸಿಟಿ, ಕುಡ್ಸೆಂಪ್, ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ ಸಾಕಷ್ಟು ವೇಗ ದೊರಕಿ ಅನುಷ್ಠಾನ ಆಗಿದೆ. 24*7 ನೀರಿನ ಯೋಜನೆಗಾಗಿ ರಸ್ತೆ ಅಗೆತ ನಡೆಸಲಾಗುತ್ತಿರುವುದರಿಂದ ಹಲವು ಕಡೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹಾಗಿದ್ದರೂ ತೊಂದರೆ ಆಗದಂತೆ ಜನರನ್ನು ವಿಶ್ವಾಸಕ್ಕೆ ಪಡೆದು, ಇಲಾಖೆಗಳ ಜತೆ ಸಮನ್ವಯತೆಯೊಂದಿಗೆ ಕಾರ್ಯ ನಡೆಸಲಾಗುತ್ತಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸವಾಲು ಇದ್ದು, ಜನರ ಸಹಕಾರ ಅಗತ್ಯವಿದೆ. ಮೇಯರ್ ಆಗಿದ್ದರೂ ವೈಯಕ್ತಿಕವಾಗಿ ಅಧಿಕಾರ ಇರುವುದಿಲ್ಲ. ಪರಿಷತ್ತಿನ ಸಭೆಯ ತೀರ್ಮಾನವೇ ಅಂತಿಮವಾಗಿರುತ್ತದೆ. ಹಾಗಾಗಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪಾರದರ್ಶಕವಾಗಿ ಸಭೆ ನಡೆಸಿರುವ ತೃಪ್ತಿ ಇದೆ. ನನ್ನ ಅಧಿಕಾರದ ಅವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕ ಹಾಕೆ ಕೆಲಸ ಮಾಡಿರುವ ಆತ್ಮ ತೃಪ್ತಿಯೂ ಇದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು. ಈ ವೇಳೆ ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.