ʻದೇವಳ ಸಿಬ್ಬಂದಿಗೆ ೬ನೇ ವೇತನ ಆಯೋಗ್ಯ ಅನ್ವಯʼ

ಸುಬ್ರಹ್ಮಣ್ಯ, ನ.೧೫- ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಸಿಬ್ಬಂದಿಗೆ 6ನೇ ವೇತನ ಆಯೋಗದಂತೆ ವೇತನ ನೀಡುವ ಬಗ್ಗೆ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಲಾಗಿದ್ದು, 15 ದಿನಗಳೊಳಗೆ ವೇತನ ನಿಗದಿಯಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಎಸ್.ಅಂಗಾರ ಅವರ ಮೇಲುಸ್ತುವಾರಿಯಲ್ಲಿ ಕೋವಿಡ್ 19 ನಿಯಮಗಳಿಗೆ ಅನುಸಾರವಾಗಿ ಚಂಪಾಷಷ್ಠಿ ಜಾತ್ರೋತ್ಸವ ಡಿ.12ರಿಂದ 22ರವರೆಗೆ ಸಾಂಗವಾಗಿ ನೆರವೇರಲಿದೆ. ರಥೋತ್ಸವ, ಉರುಳು ಸೇವೆ, ಭೋಜನ ಪ್ರಸಾದ ವಿತರಣೆ ಪರಂಪರೆಗೆ ಅನುಗುಣವಾಗಿ ಪ್ರತಿವರ್ಷದಂತೆ ನಡೆಯಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕುಮಾರಧಾರಾದಿಂದ ದೇವಳದ ತನಕ ಬೀದಿ ಉರುಳು ಸೇವೆ ನಡೆಸಲು ಮಾಸ್ಟರ್ ಪ್ಲಾೃನ್ ಯೋಜನೆಯಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ನವೆಂಬರ್ ಅಂತ್ಯದ ಮೊದಲು ಪೂರ್ಣಗೊಳ್ಳಲಿದೆ. ದೇವರ ಅವಭೃತೋತ್ಸವಕ್ಕೆ ಅನುಕೂಲವಾಗುವಂತೆ ಕುಮಾರಧಾರಾ ನದಿಯ ಜಳಕದ ಗುಂಡಿಯಲ್ಲಿ ಹೂಳು ತೆಗೆಯಲಾಗುವುದು ಎಂದು ತಿಳಿಸಿದರು. ಕುಕ್ಕೆಯಲ್ಲಿ 24 ಗಂಟೆಗಳ ಸೇವೆ ನೀಡುವ ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ ಇದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಹೆಚ್ಚುವರಿ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ದೇವಳದಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಯೋಜನೆ ಆರಂಭಿಸುವ ಬಗ್ಗೆಯೂ ಚಿಂತನೆ ಮಾಡಲಾಗುವುದು ಎಂದು ಸಚಿವ ಕೋಟ ತಿಳಿಸಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಸ್ತಾರವಾದ ಭೋಜನ ಶಾಲೆ ಮತ್ತು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇರಿದಂತೆ ಇತರ ಪೂಜಾ ಕಾರ್ಯಗಳನ್ನು ನೆರವೇರಿಸಲು ವ್ಯವಸ್ಥಿತ ಮಂದಿರ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ ಸಮಯ ಹಾಗೂ ಅನ್ನಪ್ರಸಾದದ ಸಂದರ್ಭ ಭಕ್ತರು ಒಂದೇ ಕಡೆ ಸೇರುವುದರಿಂದ ಜನಸಂದಣಿ ಉಂಟಾಗುತ್ತದೆ. ಮುಂದಿನ ಮಾಸ್ಟರ್‌ಪ್ಲಾನ್ ಯೋಜನೆಯಲ್ಲಿ ಕಾಮಗಾರಿ ನಡೆಸಲು ಪ್ರತ್ಯೇಕ ಜಾಗ ಗುರುತಿಸಿ ಪೂಜಾ ಶಾಲೆ ಹಾಗೂ ಭೋಜನ ಶಾಲೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಮುಂದುವರಿಯಲು ಸೂಚಿಸಲಾಗಿದೆ ಎಂದರು.

ಶಾಸಕ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಅಂಗಾರ, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್‌ರಾಮ್ ಸುಳ್ಳಿ, ವನಜಾ ವಿ.ಭಟ್, ಎ.ಬಿ. ಮನೋಹರ್ ರೈ, ಪಿ.ಜಿ.ಎಸ್.ಎನ್.ಪ್ರಸಾದ್, ಪ್ರಸನ್ನ ದರ್ಬೆ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಉಪಸ್ಥಿತರಿದ್ದರು.