ʻಡಿಸೆಂಬರ್‌ ವೇಳೆಗೆ ಕೆಸಿಎಫ್‌ ಅಡಿ ಪಠ್ಯಕ್ರಮ ಸಿದ್ಧʼ 

ಮಂಗಳೂರು, ನ.೨೦- ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿ ಎಲ್ಲಾ ಸಿದ್ಧತೆ ಕೈಗೊಳ್ಳಲಾ ಗುತ್ತಿದ್ದು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಆಧರಿಸಿ ರಾಜ್ಯದಲ್ಲಿಯೂ ಪಠ್ಯಕ್ರಮ ಚೌಕಟ್ಟು (ಕೆಸಿಎಫ್) ರಚಿಸಲಾಗಿದೆ. ಇದರಂತೆ ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳು ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಖಾತೆ ಸಚಿವರಾದ ಬಿ.ಸಿ.ನಾಗೇಶ್ ಹೇಳಿದರು.

ನಗರದ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ‘ಕನ್ನಡ ಶಾಲಾ ಮಕ್ಕಳ ಹಬ್ಬ’ ಬೃಹತ್ ವಿದ್ಯಾರ್ಥಿ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವ ಸಂಬಂಧ ಅಂತಿಮ ತೀರ್ಮಾನವಾಗಿದೆ. ವಿಶೇಷವಾಗಿ ಆಯಾಯ ಭಾಗದ ಸಂಸ್ಕೃತಿ, ವಿಚಾರ ಆಧಾರಿತವಾಗಿ ಕಲಿಕೆಗೆ ಪ್ರೋತ್ಸಾಹ ಸಿಗಲಿದೆ. ಮಂಗಳೂರು ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿನ ಕನ್ನಡ, ಸಮುದ್ರ, ಪರಿಸರ ಸಂಬಂಧಿತ ವಿಚಾರದಲ್ಲಿ ಅಧ್ಯಯನಕ್ಕೆ ಎನ್‌ಇಪಿಯಲ್ಲಿ ಆದ್ಯತೆ ನೀಡಲಾಗುವುದು. ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಭಾಷೆಯ ಬಗ್ಗೆ ಅಭಿಮಾನದಿಂದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಾದರಿ ಮತ್ತು ಅರ್ಥಪೂಣ ಕಾರ್ಯಕ್ರಮವನ್ನು ಆಯೋಜಿಸಿದೆ. ಈಗಾಗಲೇ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬುದಕ್ಕೆ ಮೊದಲ ಆದ್ಯತೆ ನೀಡಿದೆ. ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವ ಕಾರ್ಯವನ್ನು ಹೆತ್ತವರು ಮತ್ತು ಶಿಕ್ಷಕರು ಮಾಡಬೇಕು. ಇದುವರೆಗಿನ ಪಠ್ಯಗಳಲ್ಲಿ ಇತಿಹಾಸದ ಬಗೆಗೆ ಸುಳ್ಳು ಮಾಹಿತಿಗಳೇ ತುಂಬಿದ್ದವು. ಎನ್‌ಇಪಿ ಮೂಲಕ ಇದೆಲ್ಲವನ್ನು ದೂರ ಮಾಡಿ, ಈ ದೇಶದ ನಿಜವಾದ ಇತಿಹಾಸ ತಿಳಿಸುವ ಪ್ರಯತ್ನವಾಗಿದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಕನ್ನಡ ಶಾಲೆಯ ಸೋಲು ಅದು ನಮ್ಮ ಭಾಷೆ, ಸಂಸ್ಕೃತಿಯ ಸೋಲು. ಹಾಗಾಗಿ ಕನ್ನಡ ಶಾಲೆಗಳು ಎಂದೂ ಸೋಲದಂತೆ ನೋಡಿಕೊಳ್ಳಬೇಕು ಎಂದರು. ಐಎಎಸ್ ಅಧಿಕಾರಿ, ಯುಪಿಎಸ್‌ಸಿಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ನಂದಿನಿ ಕೆ.ಆರ್. ಮಾತನಾಡಿ, ಮೊದಲು ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇರಬೇಕು. ಸಾಧನೆಗೆ ಭಾಷೆ ಅಥವಾ ಕಲಿಯುವ ಮಾಧ್ಯಮ ಎಂದೂ ಅಡ್ಡಿಯಾಗದು. ನಮ್ಮಲ್ಲಿರುವ ಶಕ್ತಿ ಏನೆಂಬುದನ್ನು ಮೊದಲು ಅರಿತುಕೊಳ್ಳಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ.ವಾಮನ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ಕೆ.ಸಿ.ನಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಆಶಯ ಭಾಷಣ ಮಾಡಿದರು. ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಹ ಕಾರ್ಯದಶಿ ರಮೇಶ್ ಕೆ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಗೋಕರ್ಣನಾಥೇಶ್ವರ ಕಾಲೇಜು ಬಳಿಯಿಂದ ಸಂಘನಿಕೇತನದ ವರೆಗೆ ಜಾಥಾ ನಡೆಯಿತು.