ʻಚುನಾಯಿತ ಸದಸ್ಯರು ಹಿಂಜರಿಕೆ ಬಿಟ್ಟು ಆತ್ಮಸ್ಥೈರ್ಯದಿಂದ ಕೆಲಸ ಮಾಡಿʼ

ಪುತ್ತೂರು, ಎ.೪- ವಿಕೇಂದ್ರೀಕರಣ ವ್ಯವಸ್ಥೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳು ನಡೆಯಲು ಸಹಕಾರಿಯಾಗಿದ್ದು, ವಿಕೇಂದ್ರೀಕರಣ ಪ್ರಗತಿಗೆ ಪೂರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಶನಿವಾರ ಸ್ವಚ್ಛತೆ, ಮಳೆಕೊಯ್ಲು-ಅಮರಾಧಮುಕ್ತ ನಮ್ಮೂರು ಆಂದೋಲನದ ಅಡಿಯಲ್ಲಿ ಪುತ್ತೂರು ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವ ದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪುತ್ತೂರಿನ ಬಂಟರ ಭವನದಲ್ಲಿ ನಡೆದ ಗ್ರಾಮ ಸ್ವರಾಜ್ಯ-ಜನಾಧಿಕಾರ ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಂಚಾಯತ್‍ರಾಜ್ ಕಾಯ್ದೆ ಮತ್ತು ವ್ಯವಸ್ಥೆಗಳ ಬಗ್ಗೆ ಸದಸ್ಯರು ವಿಶ್ವಾಸ ಇರಿಸಬೇಕು. ಆಡಳಿತಾತ್ಮಕವಾದ ವ್ಯತ್ಯಾಸಗಳನ್ನು ಸರಿಪಡಿಸಿ ಕೊಂಡು ಹೋಗಬೇಕು. ಚುನಾಯಿತ ಸದಸ್ಯರು ಹಿಂಜರಿಕೆ ಬಿಟ್ಟು ಆತ್ಮಸ್ಥೈರ್ಯದಿಂದ ಕೆಲಸ ಮಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಸ್ಥಳೀಯಾಡಳಿತದಲ್ಲಿ ಪಕ್ಷ ಬೇಧವಿಲ್ಲದೆ ಎಲ್ಲರೂ ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಸರ್ವತೋಮುಖ ಅಭಿವೃದ್ಧಿ ಯನ್ನು ಸಾಧಿಸಲು ಸಾಧ್ಯವಿದೆ. ಹೀಗಾದಾಗ ಪಂಚಾಯತ್‍ರಾಜ್ ಉದ್ದೇಶಕ್ಕೆ ಅರ್ಥ ಬರುವುದರ ಜತೆಗೆ ಆಡಳಿತ ವಿಕೇಂದ್ರಿಕರಣಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದ ಅವರು ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪಿಡಿಒಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಎಲ್ಲಾ ಯೋಜನೆಗಳನ್ನು ಪಂಚಾಯಿತಿ ಅಧೀನಕ್ಕೆ ತರುವ ಚಿಂತನೆ ಸರ್ಕಾರದ ಮುಂದಿದೆ ಎಂದು ತಿಳಿಸಿದರು. ಗ್ರಾಮಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಗ್ರಾಪಂಗಳಲ್ಲಿ ನಡೆಯುತ್ತಿದೆ. ಅದೇ ಮಾದರಿಯಲ್ಲಿ ನಗರ ಪ್ರದೇಶಗಳಲ್ಲಿಯೂ ವಾರ್ಡ್ ಸಭೆ ನಡೆಸಿ ಫಲಾನುಭವಿಗಳ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಈ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಪಂ ವ್ಯವಸ್ಥೆ ಇಲ್ಲಿಯವರೆಗೆ ಬೆಳೆದು ಬಂದ ರೀತಿ ಹಾಗೂ ಆಡಳಿತಾತ್ಮಕವಾಗಿ ಮುಂದೆ ಬೆಳೆಯಬಹುದಾದ ಕುರಿತು ಚಿಂತನೆ ನಡೆಸಬೇಕಾದ ಅಗತ್ಯವಿದ್ದು, ಪರಿಣಾಮಕಾರಿಯಾಗಿ ಗ್ರಾಮದ ಸರಕಾರಗಳಂತೆ ಕೆಲಸ ಮಾಡಬೇಕು. ಗ್ರಾಪಂಗಳು ರಾಜಕೀಯ ರಹಿತಯವಾಗಿ ಜನಹಿತ ಕಾಪಾಡಬೇಕು. ಸದಸ್ಯರು ಪ್ರಧಾನ ಸೇವಕರಾಗಿ ಕಾರ್ಯನಿರ್ವಹಿಸಿದಾಗ ಪರಿವರ್ತನೆ ಸಾಧ್ಯ ಎಂದು ಹೇಳಿದರು. ಶಾಸಕ ಸಂಜೀವ ಮಠಂದೂರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಕಂಡಿರುವ ರಾಮ ರಾಜ್ಯದ ಕನಸು ಗ್ರಾಮ ಸ್ವರಾಜ್ಯದ ಮೂಲಕ ಈಡೇರುತ್ತಿದೆ. ಗ್ರಾಮ ಮಟ್ಟದಿಂದಲೇ ಅಭಿವೃದ್ಧಿ ಚಿಂತನೆಗಳು ಆರಂಭಗೊಳ್ಳಲು ಗ್ರಾಪಂ, ತಾಪಂ, ಜಿಪಂ ವ್ಯವಸ್ಥೆಗಳು ಸಹಕಾರಿಯಾಗಿದೆ. ತಳ ಮಟ್ಟದ ಅಭಿವೃದ್ಧಿಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕು ಎಂದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಪಂಚಾಯತ್‍ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವದಲ್ಲಿ ಪ್ರಾಮುಖ್ಯ ವಾಗಿದ್ದು ಜನರೇ ಆಡಳಿತದಲ್ಲಿ ಭಾಗಿಗಳಾಗಿ ಕೆಲಸ ಮಾಡುವ ವ್ಯವಸ್ಥೆ ಇಲ್ಲಿದೆ. ಗ್ರಾಮಗಳೇ ದೇಶದ ಆರ್ಥಿಕ ಶಕ್ತಿ. ಜನಪ್ರತಿನಿಧಿಗಳು ಕಾಯಿದೆ ಗಳ ಉದ್ದೇಶ ಅರಿತು ಕೆಲಸ ಮಾಡಬೇಕು. ಆಡಳಿತದಲ್ಲಿ ಸುಸ್ಥಿರತೆ ಕಾಪಾಡುವ ಮೂಲಕ ಅಭಿವೃದ್ಧಿ ಸಾಧ್ಯ ಎಂದರು, ಸುದ್ದಿ ಮಾಹಿತಿ ಟ್ರಸ್ಟ್ ನಾನಾ ಸಂಘಟನೆಗಳ ಸಹಕಾರದಿಂದ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಕುರಿತು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಹಾಗೂ ವಿಶಿಷ್ಟ ಮಾದರಿಯಾಗಿದೆ ಎಂದರು. ಸುದ್ದಿ ಮಾಹಿತಿ ಟ್ರಸ್ಟ್ ನ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್‍ರಾಜ್ ಕಾಯ್ದೆ ತಜ್ಞರಾದ ವಿಲ್ಫ್ರೆಡ್ ಡಿ”ಸೋಜಾ ಪಂಚಾಯತ್‍ರಾಜ್ ವ್ಯವಸ್ಥೆಯ ಇತಿಹಾಸ ಕುರಿತು ಹಾಗೂ ವೇಣು ಶರ್ಮ ವ್ಯವಸ್ಥೆಯ ಮುಂದಿನ ಯೋಜನೆ ಹೇಗಿರಬೇಕು ಎಂಬ ಕುರಿತು ಮಾಹಿತಿ ನೀಡಿದರು. ಬಳಿಕ ಪಂಚಾಯತ್‍ರಾಜ್ ವ್ಯವಸ್ಥೆಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್,  ಮಂಗಳೂರು ಅಪರಾಧ ವಿಭಾಗದ ಡಿವೈಎಸ್‍ಪಿ ದಿನಕರ ಶೆಟ್ಟಿ, ಸುದ್ದಿ ಸಮೂಹ ಸಂಸ್ಥೆಯ ಸಿಇಒ ಸೃಜನ್ ಊರುಬೈಲು ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ವಂದಿಸಿದರು. ಸುದ್ದಿ ಸಮೂಹ ಸಂಸ್ಥೆಯ ಹಿರಿಯ ವರದಿಗಾರ ದುರ್ಗಾಕುಮಾರ್ ನಾಯರ್‍ಕೆರೆ ಕಾರ್ಯಕ್ರಮ ನಿರೂಪಿಸಿದರು.