ʻಕೇಂದ್ರ-ರಾಜ್ಯ ಸರ್ಕಾರಗಳ ವೈಫಲ್ಯ ಜನರಿಗೆ ತಿಳಿಯುವಂತೆ ಮಾಡಬೇಕುʼ

ಗುರುಪುರ, ನ.1೯- ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಸಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗ್ರಾಮೀಣ ಭಾಗದ ಜನರು ತಿಳಿದುಕೊಂಡಿಲ್ಲ. ಗ್ರಾಪಂ ಚುನಾವಣೆ ಸಂದರ್ಭ ಕಾಂಗ್ರೆಸ್ ಕೆಲಸಗಳ ಪ್ರಚಾರದೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವೈಫಲ್ಯಗಳನ್ನು ಜನರು ತಿಳಿಯು ವಂತೆ ಮಾಡಬೇಕು ಹಾಗೂ ಸಮಾಜದ ಎಲ್ಲ ವರ್ಗಗಳ ಹಿತಾಸಕ್ತಿಯಿಂದ ಕಾರ್ಯಕರ್ತರು ನಿರಂತರ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಾರ್ಯಕರ್ತರಿಗೆ ಕರೆ ನೀಡಿದರು.

ಗುರುಪುರ ಕೈಕಂಬದ ಖಾಸಗಿ ಸಭಾಂಗಣವೊಂದರಲ್ಲಿ ಮಂಗಳವಾರ ಆಯೋಜಿಸಲಾದ ಗ್ರಾಪಂ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ರೈತ ಸಮುದಾಯದ ನಿರ್ನಾಮಕ್ಕಾಗಿ ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಕೊರೋನ ಸಂದರ್ಭ ತೈಲ, ಗ್ಯಾಸ್ ಬೆಲೆ ಹೆಚ್ಚಿಸಿ, ಸಬ್ಸಿಡಿ ಹಿಂಪಡೆದಿರುವ ಕೇಂದ್ರ ಸರಕಾರ ‘ಬಡವರ ರಕ್ತ ಹೀರುವ’ ಕೆಲಸ ಮಾಡಿದೆ. ದೇಶದ ಸಂಪತ್ತು ಮಾರಾಟ ಮಾಡಲು ಹೊರಟಿರುವ ಮೋದಿ ಸರಕಾರ, ಬಡವರ ದಮನಕಾರಿ ನೀತಿಗಳ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ ಎಂದು ಟೀಕಿಸಿದರು. ಈ ಸಂದರ್ಭ ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿಸೋಜ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕೇಂದ್ರ ಮತ್ತು ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ಗುಡುಗಿದರು.

ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ಮಾಜಿ ಶಾಸಕ ಮೊದಿನ್ ಬಾವ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಲ್ಲೂರಿನ ಆರು ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಸಭೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಮುಖಂಡರಾದ ಯುಪಿ ಇಬ್ರಾಹಿಂ, ಸಚಿನ್ ಅಡಪ, ಸುನಿಲ್ ಜಿ, ಗಿರೀಶ್ ಆಳ್ವ, ಸುರತ್ಕಲ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಗುರುಪುರ ಬ್ಲಾಕ್ ಮಹಿಳಾ ಅಧ್ಯಕ್ಷೆ ಸೆಲಿನಾ ಫೆರ್ನಾಂಡಿಸ್, ಪಿ. ಮೋಹನ್, ಇಂಟಕ್ ಮುಖಂಡ ಸಂಪತ್ ಲೋಬೊ, ದ.ಕ. ಸೇವಾದಳ ಅಧ್ಯಕ್ಷ ಸುರೇಶ್ ಶೆಟ್ಟಿ, ಬಾಷಾ ಮಾಸ್ಟರ್, ಗಣೇಶ್ ಪೂಜಾರಿ, ಪುರುಷೋತ್ತಮ ಮಲ್ಲಿ, ಜಾಕಿರ್, ಜಿಎಂ ಉದಯ ಭಟ್ ಉಪಸ್ಥಿತರಿದ್ದರು. ಸುರೇಂದ್ರ ಕಂಬಳಿ ಸ್ವಾಗತಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಆಳ್ವ ವಂದಿಸಿದರು.