ʻಕರ್ನಾಟಕ ಕೈಗಾರಿಕಾ ವಲಯದಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಕಂಡ ರಾಜ್ಯʼ

ಮಂಗಳೂರು, ಮಾ.2೧- ರಿಯಲ್ ಎಸ್ಟೇಟ್ ಕ್ಷೇತ್ರ ದೇಶ ರಾಜ್ಯ ನಿರ್ಮಾಣದಲ್ಲಿ ಕೊಡುಗೆ ನೀಡುತ್ತಿದೆ. ಕಾನೂನು ಬದ್ಧ ಸಂಸ್ಥೆಯಾಗಿ ಕ್ರೆಡಾಯ್  ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ದೊಡ್ಡ ಮತ್ತು ಮದ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಅವರು ನಿನ್ನೆ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಕ್ರೆಡಾಯ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಬೆಂಗಳೂರು ನಂತರದ ಸ್ಥಾನ ದಲ್ಲಿ ಮಂಗಳೂರು ಬೆಳೆಯುತ್ತಿದೆ. ಕೊರೋನಾ ನಂತರದ ಈ ದಿನಗಳಲ್ಲಿಯೂ ಕರ್ನಾಟಕ ರಾಜ್ಯ ದೇಶದ ಕೈಗಾರಿಕಾ ವಲಯದಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಯನ್ನು ಕಂಡಿರುವ ರಾಜ್ಯವಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರದ ಹಲವು ಸಮಸ್ಯೆ ನಿವಾರಣೆಗೆ ಸರಕಾರ ಹಲವು ಬದಲಾವಣೆ ಗಳನ್ನು ಕಾನೂನು ಮೂಲಕ ಮಾಡಲಾಗಿದೆ.ಮಂಗಳೂರು ಕ್ರೆಡಾಯ್ ಆರಂಭದಿಂದ ಇಂದಿನವರೆಗೂ ನಗರದ ಬೆಳವಣಿಗೆ ಗೆ ಪ್ರಮುಖ ಕೊಡುಗೆ ನೀಡಿದೆ ಈ ಕಾರ್ಯ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಮಾಜಿ ಸಚಿವ ಕೃಷ್ಣಾ ಜೆ.ಪಾಲೇಮಾರ್ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ರವಿಶಂಕರ ಮಿಜಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಪೂರ್ವಾಧ್ಯಕ್ಷ ಡಿ.ಬಿ.ಮೆಹ್ತಾ, ಜಿತೇಂದ್ರ ಕೊಟ್ಟಾರಿ ಸ್ವಾಗತಿಸಿದರು,ಮಂಜುನಾಥ್ ನಿಸರ್ಗ, ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಯಾದ ಕ್ರೆಡಾಯ್ ನ 2021-22ನೆ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಅಭೀಷ್ ಬಿಲ್ಡರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪ ರಾಜ ಜೈನ್ ಇಂದು ನಿಕಟ ಪೂರ್ವ ಅಧ್ಯಕ್ಷ ನವೀನ್ ಕಾರ್ಡೋಝಾ ರಿಂದ ಅಧಿಕಾರ ಸ್ವೀಕಾರ ಮಾಡಿದ್ದಾರೆ.