ʻಎನ್‌ಇಪಿ ದೇಶದ ಉಜ್ವಲ ಭವಿಷ್ಯಕ್ಕೆ ಪೂರಕʼ 

ಮಂಗಳೂರು, ನ.1೫- ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ದೇಶದ ಉಜ್ವಲ ಭವಿಷ್ಯಕ್ಕೆ ಪೂರಕವಾಗಿದ್ದು, ಈ ನೀತಿಯ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. 

ಕೂಳೂರು ಬಳಿ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಘಟಕವಾದ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್‌ ಮತ್ತು ಮ್ಯಾನೇಜ್‌ಮೆಂಟ್‌ನ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಸಕ್ತ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಮುನ್ನಡೆಯುವುದು ಶಿಕ್ಷಣ ಸಂಸ್ಥೆಗಳಿಗೆ ಬಹು ದೊಡ್ಡ ಸವಾಲು. ಅದರಲ್ಲೂ ಗುಣಮಟ್ಟದ ಶಿಕ್ಷಣ ಬಹು ಮುಖ್ಯವಾಗಿದ್ದು, ಯೆನೆಪೊಯ ಶಿಕ್ಷಣ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶ್ಲಾಘಿಸಿದರು. ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯು.ಟಿ.ಖಾದರ್, ಡಾ.ಭರತ್ ಶೆಟ್ಟಿ, ಮನಪಾ ಮೇಯರ್ ಜಯಾನಂದ ಅಂಚನ್, ಮನಪಾ ಸದಸ್ಯ ಕಿರಣ್ ಕುಮಾರ್ ಮತ್ತಿತರರು ಉಪ್ಥಿತರಿದ್ದರು. ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಯ ರಿಜಿಸ್ಟ್ರಾರ್ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ವೈಸ್ ಚಾನ್ಸಲರ್ ಡಾ.ಎಂ.ವಿಜಯ ಕುಮಾರ್, ಪ್ರೊ ವೈಸ್ ಚಾನ್ಸಲರ್ ಡಾ.ಬಿ.ಎಚ್.ಶ್ರೀ ಪತಿ ರಾವ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶಪಾಲ ಡಾ.ಅರುಣ್ ಭಾಗವತ್ ಸ್ವಾಗತಿಸಿದರು. ಉಪ ಪ್ರಾಂಶಪಾಲ ಶರೀನ ಎ. ಕಾರ್ಯಕ್ರಮ ನಿರೂಪಿಸಿದರು.