ʻಉಡುಪಿ ನಗರದಲ್ಲಿ ಪೇ ಪಾರ್ಕಿಂಗ್‌ಗೆ ಚಿಂತನೆʼ

ಉಡುಪಿ, ಜು.೨೧- ಈ ಹಿಂದೆ ಉಡುಪಿ ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕಾಗಿ ಜಾರಿಯಲ್ಲಿದ್ದ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಕಾರಣಾಂತರದಿಂದ ರದ್ದುಗೊಳಿಸಲಾಗಿತ್ತು. ಇದೀಗ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಉಲ್ಬಣ ಗೊಂಡಿರುವುದರಿಂದ ಮತ್ತೆ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಭೆಯಲ್ಲಿ ನಗರದ ಸಂಚಾರ ವ್ಯವಸ್ಥೆಯ ಕುರಿತು ಮಾತನಾಡಿದ ನಗರ ಸಂಚಾರ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್, ನಗರ ಸರ್ವಿಸ್ ಬಸ್ ನಿಲ್ದಾಣ, ಮೈತ್ರಿ ಕಾಂಪ್ಲೆಕ್ಸ್, ಜಟ್ಕಾ ಸ್ಟ್ಯಾಂಡ್‌ನ ಪಾರ್ಕಿಂಗ್ ಸ್ಥಳಗಳಲ್ಲಿ ಮಂಗಳೂರು ಕೆಲಸಕ್ಕೆ ಹೋಗುವ ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೆ ತಮ್ಮ ವಾಹನ ನಿಲ್ಲಿಸಿ ಹೋಗುತ್ತಾರೆ. ಅಲ್ಲದೆ ಅಡ್ಡದಿಡ್ಡಿಯಾಗಿ ನಿಲ್ಲಿಸುವುದರಿಂದ ಹೆಚ್ಚು ವಾಹನಗಳನ್ನು ನಿಲ್ಲಿಸಲು ಸ್ಥಳವಾಕಾಶದ ಕೊರತೆ ಉಂಟಾಗುತ್ತದೆ. ಅದಕ್ಕಾಗಿ ಇಂತಹ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ಮಾಡಿ, ಒಬ್ಬರನ್ನು ನಿಯೋಜಿಸಿದರೆ ಸಮಸ್ಯೆ ಪರಿಹರಿಸಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ರಘುಪತಿ ಭಟ್, ನಗರದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವುದು ಉತ್ತಮ. ಈ ನಿಟ್ಟಿನಲ್ಲಿ ಪೌರಾಯುಕ್ತರು ಯಾವ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ಮಾಡಬಹುದು ಎಂಬುದಾಗಿ ಸಮೀಕ್ಷೆ ನಡೆಸಿ ನಗರಸಭೆಗೆ ಮಂಡಿಸಲಿ ಎಂದು ತಿಳಿಸಿದರು. ನಗರದ ಏಳೆಂಟು ಕಡೆಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ನಗರ ಸಂಚಾರ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್ ಮಾಹಿತಿ ನೀಡಿದರು. ಝಿಬ್ರಾ ಕ್ರಾಸ್ ಗೊಂದಲಮಯವಾಗಿದ್ದು, ಇದನ್ನು ಸರಿಪಡಿಸಬೇಕು. ಫುಟ್ ಪಾತ್‌ಗಳಲ್ಲಿಯೇ ವ್ಯಾಪಾರ ನಡೆಸುವುದರಿಂದ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದೆ. ಕೆ.ಎಂ.ರ್ಮಾಗದಲ್ಲಿನ ಡಿವೈಡರ್‌ನಲ್ಲಿ ಅಳವಡಿಸಿರುವ ಜಾಹೀರಾತು ಬೋರ್ಡ್ ಬೀಳುವ ಸ್ಥಿತಿಯಲ್ಲಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಕಲ್ಸಂಕ ಸರ್ಕಲ್‌ನಲ್ಲಿನ ಉಡುಪಿ-ಅಂಬಾಗಿಲು ಹಾಗೂ ಅಂಬಾಗಿಲು- ಮಣಿಪಾಲ ಹೋಗುವ ರಸ್ತೆಯನ್ನು ಅಗಲ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು. ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ ಬ್ಲ್ಯಾಕ್ ಸ್ಪಾಟ್ ಎಂಬುದಾಗಿ ಗುರುತಿಸಲಾಗಿದೆ. ಕೆಲವು ಕಡೆ ಸರ್ವಿಸ್ ರಸ್ತೆಗಳಿಲ್ಲದೆ ವಾಹನ ಗಳು ವಿರುದ್ಧ ದಿಕ್ಕಿನಲ್ಲಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು. ಫೇವರ್ ಫಿನಿಶ್ ರಸ್ತೆಗಳು ಒಂದೇ ವರ್ಷಕ್ಕೆ ಕಿತ್ತು ಹೋಗಿದ್ದು, ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಪ್ರಭಾಕರ ಪೂಜಾರಿ ಸಭೆಯಲ್ಲಿ ಒತ್ತಾಯಿಸಿದರು. ಸಭೆಯಲ್ಲಿ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಹಾಜರಿದ್ದರು.