ʻಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರ ಶಕ್ತಿʼ 

ಉಡುಪಿ, ನ.೨೦- ಸಹಕಾರಿ ಕ್ಷೇತ್ರವು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಹಿರಿಯ ಬಿತ್ತಿದ ಸಹಕಾರ ಬೀಜವು ಇಂದು ದೇಶದ ಎಲ್ಲ ಕಡೆ ಗಳಿಗೂ ಪಸರಿಸಿದೆ. ದುರ್ಬಲ ವರ್ಗದವರು, ರೈತರು, ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರ ಶಕ್ತಿ ತುಂಬುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಯುವಜನ, ಮಹಿಳೆ, ಅಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅಧ್ಯಕ್ಷತೆಯನ್ನು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜಾನಕಿ ಹಂದೆ ಅವರನ್ನು ಸನ್ಮಾನಿಸಲಾಯಿತು. ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ ದಿಕ್ಸೂಚಿ ಭಾಷಣ ಮಾಡಿದರು. ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ಶಿವಾಜಿ ಸುವರ್ಣ, ಸುಧೀರ್ ಕುಮಾರ್ ವೈ., ರಮೇಶ್ ಶೆಟ್ಟಿ, ತಿಮ್ಮಪ್ಪ ಹೆಗ್ಡೆ, ಸತೀಶ್ ಶೆಟ್ಟಿ, ಶ್ರೀಧರ್ ಶೆಟ್ಟಿ, ನಾರಾಯಣ ಬಲ್ಲಾಳ್, ಸಿಇಓ ವಿಜಯಶೀಲ ಹೆಗ್ಡೆ, ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಮನೋಜ್ ಕರ್ಕೇರ, ಸಿಇಓ ಹರೀಶ್ ಬಿ.ಬಿ. ಉಪಸ್ಥಿತರಿದ್ದರು. ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಉಪಾಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಸ್ವಾಗತಿಸಿ ದರು. ಯೂನಿಯನ್ ನಿರ್ದೇಶಕ ಶ್ರೀಧರ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶಾಖ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.