ʻʻಅಸಂಘಟಿತ ಕಾರ್ಮಿಕರನ್ನು ಪಿಂಚಣಿ ಯೋಜನೆಗೆ ಸೇರಿಸಿʼ

ಉಡುಪಿ, ಜು.೧೬- ಜಿಲ್ಲೆಯಲ್ಲಿ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಹಾಗೂ ಇ-ಶ್ರಮ್ ಯೋಜನೆಯಲ್ಲಿ ನೋಂದಣಿ ಮಾಡುವಂತೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲೆಯ ನಗರ ಸ್ಥಳೀಯ  ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನಿರ್ದೇಶನ ನೀಡಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಹಾಗೂ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾ ಬೇಸ್ ಇ-ಶ್ರಮ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾತಿದ್ದರು. ಜಿಲ್ಲೆಯಲ್ಲಿ ೧೮-೪೦ ವರ್ಷದೊಳಗಿನ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಕುರಿತಂತೆ ಅಸಂಘಟಿತ ಕಾರ್ಮಿಕರ ವೃತ್ತಿವಾರು ಸಂಘಗಳೊಂದಿಗೆ  ಸಮಾಲೋಚನೆ ನಡೆಸಿ. ನಿಗದಿತ ಸ್ಥಳ ಮತ್ತು ದಿನಾಂಕವನ್ನು ನಿಗದಿ ಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಎಲ್ಲಾ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನಗಳ ಕುರಿತು ಅರಿವು ಮೂಡಿಸಿ. ಸ್ಥಳದಲ್ಲೇ ನೋಂದಣಿ ಕಾರ್ಯವನ್ನು ಮಾಡುವ ಮೂಲಕ ಪಿಂಚಣಿ ಸೌಲಭ್ಯ ಪಡೆಯಲು ಯೋಜನೆಗೆ ಸೇರ್ಪಡೆ ಮಾಡುವಂತೆ ತಿಳಿಸಿದರು. ಕಾರ್ಮಿಕರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಕಾರ್ಯಕ್ರಮ ಆಯೋಜನೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ನಿಗದಿತ ಸ್ಥಳ ಗುರುತಿಸಿ ಎಲ್ಲಾ ಅಗತ್ಯ ಸಹಕಾರವನ್ನು ನೀಡಬೇಕು. ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸಹಕಾರ ಪಡೆಯುವಂತೆಯೂ ಡಿಸಿ ತಿಳಿಸಿದರು. ಜಿಲ್ಲೆಯ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಯೋಜನೆಯಲ್ಲಿ ನೊಂದಣಿ ಮಾಡುವ ಕುರಿತಂತೆ ಎಲ್ಲಾ ಇಲಾಖೆಗಳು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಮಾಹಿತಿಗಳನ್ನು ನೀಡಬೇಕು. ಅಲ್ಲದೇ ನೋಂದಣಿ ಶಿಬಿರಗಳನ್ನು ಆಯೋಜಿಸಿ, ಇ-ಶ್ರಮ್ ನೋಂದಣಿಯ ಪ್ರಯೋಜನಗಳ ಬಗ್ಗೆ ಕಾರ್ಮಿಕ ಇಲಾಖೆ ಮತ್ತು ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಕಾರ್ಮಿಕರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು. ಜುಲೈ ೨೫ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ-ಶ್ರಮ್ ನೊಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡುವ ಕುರಿತಂತೆ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ. ಅರ್ಹ ಎಲ್ಲಾ ಕಾರ್ಮಿಕರನ್ನು ನೊಂದಣಿ ಮಾಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಕುರಿತೂ ಸಹ ಅರಿವು ಕಾರ್ಯಕ್ರಮಗಳನ್ನು ಆಯೋಜಿಸು ವಂತೆ ಕೂರ್ಮಾರಾವ್ ತಿಳಿಸಿದರು. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ದರ್ಶಿ ಶರ್ಮಿಳಾ ಎಸ್., ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ವಿವಿಧ ಅನುಷ್ಠಾನಾಧಿಕಾರಿಗಳು ಹಾಗೂ ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.