ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು- ಮೇಯರ್ ಲಿಂಗಪ್ಪ

ಮೈಸೂರು, ಜ. ೨೭- ಬೇಸಿಗೆ ಸಮೀಪಿಸುತ್ತಿರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳಬೇಕಾಗಿದೆ. ಜಸ್ಕೋ ಕಂಪನಿ ನೀರಿನ ನಿರ್ವಹಣೆ ಬಗ್ಗೆ ಮುಂದಿನ ಬಾರಿ ಚರ್ಚೆ ನಡೆಸೋಣ ಎಂದು ಮೇಯರ್ ಲಿಂಗಪ್ಪ ತಿಳಿಸಿದರು.

ಇಂದು ಬೆಳಿಗ್ಗೆ ನಗರ ಪಾಲಿಕೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯನ್ನು ವಿತರಣಾ ಜಾಲದ ನವೀಕರಣ ಮತ್ತು 24x7 ನೀರು ಸರಬರಾಜು ಯೋಜನೆಗೆ ಮಾರ್ಪಡಿಸಲು ಮೇ. ಅಂತ್ಯದ ವರೆಗೂ ಜಸ್ಕೋ ಸಂಸ್ಥೆ ಇವರಿಗೆ ಟೆಂಡರ್ ಮೂಲಕ ತ್ರಿಪಕ್ಷೀಯ ಕರಾರು ಸಂಖ್ಯೆ 7 ಮತ್ತು 8/ 2008-09 ದಿ.28/11/2008 ರಲ್ಲಿ ವಹಿಸಿಕೊಡಲಾಗಿತ್ತು. ಗುತ್ತಿಗೆ ಕರಾರು ಮೊತ್ತ 169.89 ಕೋಟಿ ರೂಗಳು ಇದರಲ್ಲಿ ಕಾಮಗಾರಿ ವೆಚ್ಚ 120.27 ಕೋಟಿ, ನಿರ್ವಹಣಾ ವೆಚ್ಚ 41.62 ಕೋಟಿ ರೂಗಳಾಗಿರುತ್ತವೆ ಎಂದು ತಿಳಿಸಿದರು.

ಸಭೆಯಲ್ಲಿ ನಗರಪಾಲಿಕೆ ಸದಸ್ಯರು ಕುಡಿಯುವ ನೀರಿನ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಈ ಕಾಮಗಾರಿಯನ್ನು 21/1/2015ಕ್ಕೆ ಮುಗಿಯಬೇಕಾಗಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಜಸ್ಕೋ ಸಂಸ್ಥೆಯು ಈ ವರ್ಷದ ಮೇ ಅಂತ್ಯದ ವರೆಗೂ ವಿಸ್ತರಿಸಲು ಅವಕಾಶ ಕೋರಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನೆನ್ನೆಯೂ ಕೂಡ ಚರ್ಚೆ ನ‌ಡೆದು ಅದು ಇಂದು ಕೂಡ ಚರ್ಚೆ ನಡೆಯಿತು. ಒಟ್ಟಾರೆ ಪಾಲಿಕೆ ಸದಸ್ಯರು ಈ ಹಿಂದೆ ನೀಡಿದ ಕರಾರಿನಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣದಿಂದಲೂ ಹೆಚ್ಚುವರಿ ಹಣವನ್ನು ಪಾಲಿಕೆ ವತಿಯಿಂದ ನೀಡಲಾಗುವುದಿಲ್ಲ. ಈ ಕರಾರಿಗೆ ಒಪ್ಪಿದರೆ ಮಾತ್ರ ಕಾಮಗಾರಿ ಮುಂದುವರೆಸಲು ಅನುಮತಿ ನೀಡಿ ಎಂದು ಒಕ್ಕೊರಳಿನಿಂದ ಹೇಳಿದರು. ಈ ನಿರ್ಣಯಕ್ಕೆ ಬರುವ ಮುನ್ನ ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆಯುವುದು ಸೂಕ್ತ ಎಂದರು.

ಪ್ರತಿ ಹಂತದಲ್ಲೂ ಜಸ್ಕೋ ಸಂಸ್ಥೆಯವರು ಸಾರ್ವಜನಿಕರ ಕಣ್ಣೊರೆಸುವ ತಂತ್ರವನ್ನು ಬಳಸುತ್ತಿದ್ದಾರೆ. ಕೆಲವು ವಾರ್ಡ್ ಗಳಲ್ಲಿ ಕೆಲಸ ಮುಗಿದಿದ್ದರೂ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಆದರೆ ಪ್ರತಿ ತಿಂಗಳು ನೀರಿನ ಬಿಲ್ ಪಾವತಿಸುವಂತೆ ಬಿಲ್ ನ್ನು ನೀಡಲಾಗುತ್ತಿದೆ. ಹೀಗೆ ನೀರು ಸರಬರಾಜು ಮಾಡದಿದ್ದರೂ ಬಿಲ್ಲನ್ನು ಪಾವತಿಸುವಂತೆ ಬಿಲ್ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಈ ದಿಸೆಯಲ್ಲಿ ಜಲಮಂಡಳಿಯವರು ಏನು ಮಾಡುತ್ತಿದ್ದಾರೆ ಎಂದು ಏರಿದ ಎತ್ತರದ ಧ್ವನಿಯಲ್ಲಿ ಮೇಯರ್ ರವರನ್ನು ಪ್ರಶ್ನಿಸಿದರು. ಅದಕ್ಕೆ ಮಹಾಪೌರರು ಮೊದಲು ಜಸ್ಕೋ ಕಂಪನಿಯವರಿಗೆ ಈ ವರ್ಷಗ ಮೇ ಅಂತ್ಯದ ವರೆಗೆ ಕಾಮಗಾರಿಗಳನ್ನು ಅನುಷ್ಠಾನದ ನಿರ್ವಹಣೆಯನ್ನು ವಹಿಸುವುದರ ಬಗ್ಗೆ ಮೊದಲು ಚರ್ಚೆಯಾಗಲಿ. ನಂತರ ಎಲ್ಲಾ ವಾರ್ಡುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸೋಣ ಎಂದರು. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿರುವುದರಿಂದ ಆ ಚರ್ಚೆಯಲ್ಲಿ ಸಮರ್ಪಕ ನೀರು ಸರಬರಾಜು ಬಗ್ಗೆ ಚರ್ಚಿಸುವುದು ಸೂಕ್ತ ಎಂದು ಲಿಂಗಪ್ಪ ಉತ್ತರಿಸಿದರು.

ಇಂದಿನ ಸಭೆಯಲ್ಲಿ ಉಪಮಹಾಪೌರರಾದ ಮಹಾದೇವಮ್ಮ, ಆಯುಕ್ತ ಬೆಟ್ ಸೂರ್ ಮಠ್, ಜಸ್ತೋ ಕಂಪನಿ ಅಧಿಕಾರಿಗಳು, ಜಲಮಂಡಳಿ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

Post Title

ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮೈಸೂರು, ಜ. ೨೭- ಬಿಜೆಪಿ ಪಕ್ಷವು ದೇಶಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಹೆಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷವು ಸಹ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಹಿರಿಯ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ ಸಿಂಗ್ ರವರು ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ಚುರಕು ಮುಟ್ಟಿಸಿ ರಾಜ್ಯದಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸುವಂತೆ ಸೂಚಿಸಿದರು. ಇದರಿಂದ ಜಾಗೃತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಪರಮೇಶ್ವರ್ ರವರು ಎಲ್ಲಾ ಜಿಲ್ಲೆಯ ಅಧ್ಯಕ್ಷರಿಗೆ ಸದಸ್ಯತ್ವ ಅಭಿಯಾನವನ್ನು ಆರಂಭಿಸುವಂತೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅಗ್ರಹಾರ ವೃತ್ತದಲ್ಲಿ ಸಚಿವ ಶ್ರೀನಿವಾಸ್ ಪ್ರಸಾದ್ ಅಭಿಯಾನಕ್ಕೆ ಚಾಲನೆ ನೀಡಿದರು.

ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದು ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಹಿನ್ನೆಡೆ ಸಾಧಿಸಿದೆ. ಹೇಗಾದರೂ ಮಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಕ್ರಿಯಾಶೀಲರಾಗುವಂತೆ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಗ್ರಾಮಗಳು, ಪಟ್ಟಣಗಳಲ್ಲಿ ಹೆಚ್ಚು ಹೆಚ್ಚಾಗಿ ಪಕ್ಷಕ್ಕೆ ಸದಸ್ಯರನ್ನು ಸೇರ್ಪಡೆಗೊಳ್ಳುವಂತೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಕಾರ್ಯಕರ್ತರು ಇಂದಿನಿಂದಲೇ ಕಾರ್ಯೋನ್ಮುಖರಾಗುವಂತೆ ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಶಿವಣ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಸಂವಿಧಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ -ಎಂ.ಶಿವಣ್ಣ

ಮೈಸೂರು, ಜ. ೨೭- ಸಂವಿಧಾನದ ಆಶಯಗಳನ್ನು ಆಡಳಿತ ನಡೆಸುವ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಮೂರು ವ್ಯವಸ್ಥೆಗಳು ದೇಶದಲ್ಲಿ ಸರಿಯಾಗಿ ನಡೆದರೆ ಈ ದೇಶದ ಚಿತ್ರಣಗಳೇ ಬದಲಾಗುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಹಣಕಾಸು ಸಚಿವ ಎಂ.ಶಿವಣ್ಣ ರವರು ಅಭಿಪ್ರಾಯ ಪಟ್ಟರು.

ಅವರು ಮೈಸೂರಿನ ಸರ್ವಜನಾಂಗದ ಹಿತರಕ್ಷಣ ವೇದಿಕೆ ವತಿಯಿಂದ ಆಯೋಜಿಸಿದ್ದ 66ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರಿಕರ ಜಾಗೃತರಾಗಿ ತಿಳುವಳಿಕೆ ಪಡೆದುಕೊಳ್ಳಬೇಕು ಸಂವಿಧಾನದ ಆಶಯಗಳನ್ನು ಆಡಳಿತ ನಡೆಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ವ್ಯವಸ್ಥೆಗಳು ದೇಶದಲ್ಲಿ ಸರಿಯಾಗಿ ನಡೆದರೆ ದೇಶದ ಚಿತ್ರಣಗಳೇ ಬದಲಾಗುತ್ತದೆ ಭಾರತದ ಸಂವಿಧಾನ ಎಲ್ಲಾ ದೇಶಗಳಿಗೆ ಮಾದರಿ ಸಂವಿಧಾನವಾಗಿದೆ. ಆದ್ದರಿಂದ ಸಂವಿಧಾನದ ಬಗ್ಗೆ ತಿಳುವಳಿಕೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ವೇಣುಗೋಪಾಲ್ ರವರು ಘನ ಸಂವಿಧಾನವು ಭಾರತ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಸಂವಿಧಾನಾತ್ಮಕವಾದ ಹಕ್ಕುಗಳನ್ನು ಅಂಬೇಡ್ಕರ್ ರವರು ಇದರ ಶಿಲ್ಪಿಯಾಗಿ ಈ ದೇಶದ ಸಾವಿರಾರೂ ಜಾತಿ ನೂರಾರು ಭಾಷೆ ಜನರ ಆಶಯಗಳಿಗೆ ಧಕ್ಕೆಯಾಗದಂತೆ ಹಲವಾರು ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದಾರೆ. ಇದ್ದರಿಂದ ನಾವೆಲ್ಲರೂ ದೇಶದ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿಗೊಳ್ಳಬೇಕೆಂದು ತಿಳಿ ಹೇಳಿದರು.

ಧ್ವಜರೋಹಣ ಕಾರ್ಯಕ್ರಮವನ್ನು ಬನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಎಂ.ಕೃಷ್ಣಪ್ಪನವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ಶ್ರೀ ಅನಂತುರವರು, ಎಂ.ಪ್ರಭುದೇವ್, ಜಿ.ಎಂ.ಗಾಡ್ಕರ್, ಅಬ್ದುಲ್ ಗಫರ್, ವಜ್ರೇಗೌಡ, ಮುಂತಾದವರು ಹಾಜರಿದ್ದರು.

ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ದೊಡ್ಡದು - ಸಚಿವ ಶ್ರೀನಿವಾಸ್ ಪ್ರಸಾದ್

ಮೈಸೂರು, ಜ. ೨೭- ಸ್ವಚ್ಚ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ದೊಡ್ಡದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ತಿಳಿಸಿದರು.

ಅವರು ಇಂದು ಮಾನಸಗಂಗೋತ್ರಿ ಲಲಿತಾ ಕಲಾ ಸಭಾಂಗಣದಲ್ಲಿ ನಡೆದ ನೆಹರು ಯುವ ಕೇಂದ್ರ ಜಿಲ್ಲಾ ಸಮಾವೇಶಕ್ಕೆ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಯುವಕರು ಬೇಜವ್ದಾರಿಯಿಂದ ಇದ್ದಾರೆ ಎಂಬುದು ಸಹಜವಾದ ಮಾತು. ಆದರೆ ಅವರಿಗೆ ಜವಬ್ದಾರಿ ಕಾರ್ಯಗಳನ್ನು ನೀಡಬೇಕು ಎಂದರು.

ಗಾಂಧಿಜೀಯವರು ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರನ್ನು ಹುರುದುಂಬಿಸಿ ಅವರನ್ನು ಬ್ರಿಟಿಷರ ವಿರುದ್ಧ ಅಘಾಧಶಕ್ತಿಯನ್ನು ಪ್ರದರ್ಶಿಸಲಾಯಿತು. ಸ್ವತಂತ್ರ ಭಾರತ ಕಟ್ಟುವಲ್ಲಿಯೂ ಕೂಡ ಯುವಕರು ಮುಖ್ಯ ಪಾತ್ರ ವಹಿಸಿದರು. ಅದರಂತೆ ಗಾಂಧಿಜೀಯವರು ಯುವಕರಲ್ಲಿ ಅಪಾರ ವಿಶ್ವಾಸ ಇಟ್ಟಿದ್ದರು.

ಇಂದಿನ ಯುವಕರು ಜಾತ್ಯಾತೀತ ಧರ್ಮ ವಿರೋಧಿ, ಭಾಷಾ ವಿರೋಧಿ ಚಟುವಟಿಕೆಗಳಲ್ಲಿ ತೊಡಗದೆ ನಾಡಿನ ಸಮಸ್ಯೆಗಳನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದರು.

ಸ್ವಾಮೀವಿವೇಕನಂದರು ತಮ್ಮ ಆದ್ಯಾತ್ಮದ ಮೂಲಕ ಯುವಕರನ್ನು ಪ್ರಜ್ಞವಂತರಾಗುವಂತೆ ಪ್ರೇರೆಪಿಸಿದ್ದರು. ಇಂದಿನ ಯುವಕರು ಅಂತಹ ಮಹಾನುಭಾವಿಗಳ ಆದರ್ಶ ಮಾರ್ಗವನ್ನು ಪಾಲಿಸಬೇಕು ಅಲ್ಲದೆ ಸರಿ ತಪ್ಪುಗಳ ಚಿಂತನೆ ಮಾಡಬೇಕಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಯುವಕರ ಪಾತ್ರ ದೊಡ್ಡದು 18 ವರ್ಷ ತುಂಬಿದ ಯುವಕ -ಯುವತಿಯರಿಗೆ ಮತದಾನದ ಹಕ್ಕನ್ನು ನೀಡಿ ಯುವ ಶಕ್ತಿಯನ್ನು ಬಲಿಷ್ಟ ಗೊಳಿಸಬೇಕಾಗಿದೆ. ದೇಶದ ಆಡಳಿತವನ್ನು ಬದಲಾಯಿಸುವ ಶಕ್ತಿ ಯುವಕರ ಮೇಲಿದೆ ಇಂದಿನ ಯುವಕರಲ್ಲಿ ರಾಷ್ಟ್ರಾಕ್ಯತೆ, ಭಾವೈಕ್ಯತೆ ಬಗ್ಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದ್ದು ಅಂತಹ ಉತ್ಸಾಹಿ ಯುವಕರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಆರ್.ಲಿಂಗಪ್ಪ, ಡಾ.ಪುಷ್ಪ ಅಮರನಾಥ್, ಆರ್. ಮೂರ್ತಿ, ಶಾಸಕ ವಾಸು, ಮುಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹಾಗೂ ವಿದ್ಯಾರ್ಥಿಗಳು ಇದ್ದರು.