ರಿಕ್ಷಾ ಚಾಲಕನ ಹಲ್ಲೆ ಪ್ರಕರಣ ಕೆಲವು ಶಂಕಿತರು ಪೊಲೀಸರ ವಶಕ್ಕೆ

ಮಹತ್ವದ ಸುಳಿವುಗಳು ಲಭ್ಯ

ಮಂಗಳೂರು, ಆ.೩0- ನಿನ್ನೆ ಬೆಳಿಗ್ಗೆ ಕಿನ್ಯ ಗ್ರಾಮದ ಸಂಕೇಶ ರಸ್ತೆಯ ಮಾಂಗಟ್ಟೆ ಎಂಬಲ್ಲಿ ತನ್ನ ರಿಕ್ಷಾದಲ್ಲಿ ಶವವಾಗಿ ಪತ್ತೆಯಾದ ಚಾಲಕನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕೌಟುಂಬಿಕ ವಿವಾದದಲ್ಲಿ ಈ ಹತ್ಯೆ ನಡೆದಿದೆಯೆನ್ನಲಾಗಿದೆ.

ಕೊಲೆಯಾಗಿರುವ ಹಿದಾಯತ್ (35) ಉಳ್ಳಾಲ ಅಳೇಕಲ ನಿವಾಸಿ ಅಬ್ದುಲ್ ಖಾದರ್ ರ ಪುತ್ರನಾಗಿದ್ದು, ತೊಕ್ಕೊಟ್ಟು ಒಳಪೇಟೆಯ ರಿಕ್ಷಾಪಾರ್ಕ್ ನಲ್ಲಿ ಬಾಡಿಗೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ರಿಕ್ಷಾ ಪಾರ್ಕ್ ನಿಂದ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಹಿದಾಯತ್ ಬಾಡಿಗೆಗೆ ದೂರ ಹೋಗುತ್ತಿದ್ದೇನೆ. ಅಡುಗೆ ಮಾಡುವುದು ಬೇಡ, ಬರುವಾಗ ಊಟ ತರುತ್ತೇನೆ ಎಂದು ತಿಳಿಸಿದ್ದರು. ತಡರಾತ್ರಿಯಾದರೂ ಹಿದಾಯತ್ ಮನೆಗೆ ಮರಳಿರಲಿಲ್ಲ. ಪತ್ನಿ ಈ ವಿಷಯವನ್ನು ಹಿದಾಯತ್ ಸೋದರ ಹನೀಫ್ ಗೆ ತಿಳಿಸಿದ್ದು, ಹನೀಫ್ ಮತ್ತು ಇನ್ನೋರ್ವ ಸೋದರ ಮಹಮ್ಮದ್ ರಫೀಕ್ ನಿನ್ನೆ ಬೆಳಿಗ್ಗೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಇದೇ ವೇಳೆ ಮಾಂಗಟ್ಟೆ ಬಳಿ ನಿರ್ಜನ ಪ್ರದೇಶದಲ್ಲಿ ಹಿದಾಯತ್ ರ ರಿಕ್ಷಾ ಪತ್ತೆಯಾಗಿದ್ದು, ಅದರಲ್ಲಿ ಚಾಲಕನ ಸ್ಥಾನದಲ್ಲಿ ಹಿದಾಯತ್ ರ ಶವವಿತ್ತು. ತಲೆಯ ಹಿಂಬದಿಗೆ ಭಾರೀ ಕಲ್ಲಿನಿಂದ ಜಜ್ಜಿ, ದೊಣ್ಣೆಯಿಂದ ಬಡಿದು ಅವರ ಹತ್ಯೆ ಮಾಡಲಾಗಿತ್ತು.

ಹಿದಾಯತ್ ಮೊದಲ ಪತ್ನಿಗೆ ತಲಾಖ್ ನೀಡಿದ್ದು, 10 ತಿಂಗಳ ಹಿಂದೆ ಇನ್ನೊಂದು ಮದುವೆ ಮಾಡಿಕೊಂಡಿದ್ದರು. ಮೊದಲ ಪತ್ನಿ ಇನ್ನೊಬ್ಬರನ್ನು ಮರುಮದುವೆ ಮಾಡಿಕೊಂಡಿದ್ದಾಳೆ. ಆದರೆ ಹಿದಾಯತ್ ಆಕೆಗೆ ದೂರವಾಣಿ ಕರೆ, ಮೆಸೇಜ್ ಗಳನ್ನು ಮಾಡಿ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಆಕೆಯ ಸೋದರರು ಮತ್ತು ಎರಡನೇ ಪತಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಮೊದಲ ಪತ್ನಿಯ ಸೋದರ ತನಗೆ ಎರಡು ದಿನಗಳ ಹಿಂದೆ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಹಿದಾಯತ್ ಶುಕ್ರವಾರ ಉಳ್ಳಾಲ ಠಾಣೆಗೆ ಮೌಖಿಕ ದೂರು ನೀಡಿದ್ದರು. ಆದರೆ ಎಫ್ಐಆರ್ ದಾಖಲಾಗುವ ಮೊದಲೇ ಅವರ ಕೊಲೆ ನಡೆದು ಹೋಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Post Title

ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ದುರ್ಮರಣ

ವಿಟ್ಲ, ಆ.೩೦- ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಸಾಲೆತ್ತೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸಾಲೆತ್ತೂರು ಗ್ರಾಮದ ಮಲಾರು ಕೋಡಿ ನಿವಾಸಿ, ದಿ. ಐತಪ್ಪ ನಾಯ್ಕರ ಪುತ್ರ ಬಾಲಕೃಷ್ಣ (35) ಎಂದು ಹೆಸರಿಸಲಾಗಿದೆ. ನಿನ್ನ ಬೆಳಿಗ್ಗೆ ಮನೆಯ ಪಕ್ಕದಲ್ಲಿರುವ ಬಾವಿಯ ಬಳಿ ಬಟ್ಟೆಗಳನ್ನು ಒಗೆಯುತ್ತಿದ್ದ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮೃತರ ಅಣ್ಣ ಈಶ್ವರ ನಾಯ್ಕರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಕೌಟುಂಬಿಕ ವಿವಾದದಿಂದ ನೊಂದ ಯುವಕ ಆತ್ಮಹತ್ಯೆ

ಬೆಳ್ತಂಗಡಿ, ಆ.೩೦- ಕೌಟುಂಬಿಕ ಗಲಾಟೆ ಮತ್ತು ತಂದೆಯ ಬೈಗಳಿಂದ ಬೇಸತ್ತಿದ್ದ ಹದಿಹರೆಯದ ಯುವಕನೋರ್ವ ಇಲಿಪಾಷಾಣ ತಿಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ.

ನಾಗಭೂಷಣ್ (19) ಮೃತ ಯುವಕ. ತಂದೆ-ತಾಯಿ ನಡುವೆ ಆಗಾಗ್ಗೆ ಕೌಟುಂಬಿಕ ಗಲಾಟೆಗಳು ನಡೆಯುತ್ತಿದ್ದು, ವಾರದ ಹಿಂದೆ ತಂದೆ ರವಿ ಸಮೀಪದಲ್ಲಿಯೇ ಇರುವ ತಾಯಿಯ ಮನೆ ಸೇರಿಕೊಂಡವರು ವಾರವಾದರೂ ವಾಪಸ್ ಬಂದಿರಲಿಲ್ಲ. ಆ.27ರಂದು ರಾತ್ರಿ 10 ಗಂಟೆಗೆ ನಾಗಭೂಷಣ್ ಮನೆಯ ಬಳಿ ನಿಂತುಕೊಂಡು ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದು, ಇದನ್ನು ಕಂಡ ತಂದೆ, ಅಜ್ಜಿ ಮತ್ತು ಚಿಕ್ಕಪ್ಪ ಶೀನ ಅಪಾರ್ಥ ಮಾಡಿಕೊಂಡು ಆತನನ್ನು ಬೈದಿದ್ದರೆನ್ನಲಾಗಿದೆ. ಮೊದಲೇ ಕೌಟುಂಬಿಕ ವಿವಾದದಿಂದ ನೊಂದುಕೊಂಡಿದ್ದ ನಾಗಭೂಷಣ್ ಇದರಿಂದ ಇನ್ನಷ್ಟು ನೊಂದುಕೊಂಡು ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಗಭೂಷಣ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾನೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಮುಖಂಡ ಚಂದ್ರಶೇಖರ ಉಚ್ಚಿಲ ಮನೆಗೆ ದುಷ್ಕರ್ಮಿಗಳ ದಾಳಿ- 6 ಜನರ ಸೆರೆ

ಮಂಗಳೂರು, ಆ.30- ಸೋಮೇಶ್ವರ ಉಚ್ಚಿಲ ನಿವಾಸಿ, ಬಿಜೆಪಿಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ ಅವರ ಮನೆಗೆ ಮೊನ್ನೆ ತಡರಾತ್ರಿ ನುಗ್ಗಿದ ಮಾರಕಾಸ್ತ್ರಗಳೊಂದಿಗೆ ಸಜ್ಜಿತ ತಂಡ ದಾಂದಲೆ ನಡೆಸಿದೆ. ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಜನಾಡಿ ನಿವಾಸಿಗಳಾದ ನಝೀರ್, ರುಕ್ಸಾನ್, ರಫೀಕ್, ತೈಸರ್, ರಮೀಝ್, ಕಿನ್ಯ ನಿವಾಸಿ ಫಯಾಜ್ ಬಂಧಿತ ಆರೋಪಿಗಳಾಗಿದ್ದಾರೆ.

ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಎರಡು ಬೈಕ್ ಗಳಲ್ಲಿ ಆರು ಯುವಕರು ಉಚ್ಚಿಲದ ಮನೆಯ ಬಳಿ ಬಂದಿದ್ದು, ಅವರ ಪೈಕಿ ಓರ್ವ ಆವರಣ ಪ್ರವೇಶಿಸಿ ಮನೆಯ ಬಾಗಿಲು ಬಡಿದಿದ್ದ. ಈ ವೇಳೆ ಉಚ್ಚಿಲರು ಮನೆಯಲ್ಲಿರಲಿಲ್ಲ. ಅವರ ಸೋದರನ ಮಗ, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್ ಬಾಗಿಲು ತೆರೆಯಲು ಮುಂದಾದಾಗ ತಂಡದಲ್ಲಿದ್ದವರು ಅವಾಚ್ಯ ಶಬ್ದಗಳಿಂದ ಬೈದು ತಲವಾರಿನಿಂದ ಹಲ್ಲೆಗೆ ಮುಂದಾಗಿದ್ದರು. ಅಪಾಯವನ್ನು ಗ್ರಹಿಸಿದ ರಾಜೇಶ್ ತಕ್ಷಣ ಬಾಗಿಲು ಹಾಕಿಕೊಂಡು ಸ್ನೇಹಿತರಿಗೆ ದೂರವಾಣಿ ಕರೆ ಮಾಡಿದ್ದರು. ಬೊಬ್ಬೆ ಕೇಳಿ ನೆರೆಕರೆಯವರೂ ಧಾವಿಸಿ ಬಂದಿದ್ದು, ದಾಳಿಕೋರರು ಅಲ್ಲಿಂದ ಬೀರಿ ಕಡೆಗೆ ಪರಾರಿಯಾಗಿದ್ದರು. ರಾಜೇಶ್ ಉಚ್ಚಿಲ್ ರ ಸ್ನೇಹಿತರು ಬೀರಿ ಬಳಿ ಒಂದು ಬೈಕ್ ನ್ನು ತಡೆದಿದ್ದು, ಅದರಲ್ಲಿದ್ದ ಇಬ್ಬರು ಪರಾರಿಯಾಗಿ, ರುಕ್ಸಾನ್ ಎಂಬಾತ ಸಿಕ್ಕಿ ಬಿದ್ದಿದ್ದ. ಆತನನ್ನು ಪೊಲೀಸರಿಗೊಪ್ಪಿಸಲಾಗಿತ್ತು.

ರುಕ್ಸಾನ್ ಕಡೆಯಿಂದಲೇ ಆತನ ತಂಡಕ್ಕೆ ದೂರವಾಣಿ ಕರೆ ಮಾಡಿಸಿದ್ದ ಪೊಲೀಸರು ತಾನು ಬೀದಿಯ ಕಟ್ಟಡವೊಂದರ ಬಳಿಯಿದ್ದೇನೆ, ತನ್ನನ್ನು ಕರೆದುಕೊಂಡು ಹೋಗಿ ಎಂದು ಹೇಳಿಸಿದ್ದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಇತರ ಆರೋಪಿಗಳು ಕಾರಿನಲ್ಲಿ ಅಲ್ಲಿಗೆ ಬಂದಾಗ ಅವರನ್ನು ಬಂಧಿಸಲಾಗಿದೆ.

ಈ ಹಿಂದೆ ಚಂದ್ರಶೇಖರ ಉಚ್ಚಿಲ ಅವರ ಕೊಲೆಗೆ ಎರಡು ಬಾರಿ ಯತ್ನ ನಡೆದಿದ್ದು, ಆ ಬಗ್ಗೆ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಲೇ ಇದೆ. ತನ್ಮಧ್ಯೆ, ಆರೋಪಿಗಳು ರಾಜಿಯಲ್ಲಿ ಪ್ರಕರಣವನ್ನೂ ಇತ್ಯರ್ಥಗೊಳಿಸಿಕೊಳ್ಳಲು ಯತ್ನಿಸಿದ್ದು, ಉಚ್ಚಿಲ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಇದೇ ದ್ವೇಷದಿಂದ ಇದೀಗ ಮೂರನೇ ಬಾರಿಗೆ ಅವರ ಹತ್ಯೆಗೆ ಸಜ್ಜಾಗಿ ಈ ತಂಡ ಬಂದಿತ್ತೆಂದು ಶಂಕಿಸಲಾಗಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈಶ್ವರಮಂಗಲ ಪಂಚಮುಖೀ ಶ್ರೀ ಆಂಜನೇಯ ಕ್ಷೇತ್ರಕ್ಕೆ ಮೈಸೂರು ರಾಜಕುಟುಂಬ ಭೇಟಿ

ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಾಧನೆಗೆ ರಾಜಮಾತೆಯ ಮೆಚ್ಚುಗೆ!

ಪುತ್ತೂರು, ಆ.30- ದಕ್ಷಿಣ ಕನ್ನಡ ಜಿಲ್ಲೆ ನಮ್ಮ ರಾಜ್ಯದಲ್ಲೇ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದ್ದು, ಉತ್ತಮ ಸಾಕ್ಷರತೆ ಹೊಂದಿದೆ. ಇದನ್ನು ನಾನು ಹಿಂದಿನಿಂದಲೇ ಗಮನಿಸಿದ್ದು, ತುಂಬಾ ಖುಷಿ ಕೊಟ್ಟಿದೆ ಎಂದು ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿರುವ ಪಂಚಮುಖೀ ಆಂಜನೇಯ ಕ್ಷೇತ್ರಕ್ಕೆ ಶನಿವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನೆಮ್ಮದಿ ಸಿಕ್ಕಿದೆ...

ಈಶ್ವರ ಮಂಗಳ ಪಂಚಮುಖೀ ಆಂಜನೇಯ ಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ್ದೇನೆ. ಇಲ್ಲಿ ದೇವರ ದರ್ಶನ ನೆಮ್ಮದಿ ಕೊಟ್ಟಿದೆ. ಆಂಜನೇಯ ಕರೆಸಿಕೊಂಡರೆ ಮತ್ತೆ ಮತ್ತೆ ಬರುತ್ತೇನೆ ಎಂದವರು ನುಡಿದರು. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೊದಲ ಬಾರಿಯ ಭೇಟಿ ರೋಮಾಂಚನ ನೀಡಿದೆ. ಮತ್ತೆ ಮತ್ತೆ ಇಲ್ಲಿಗೆ ಬರಬೇಕೆಂಬ ಆಸೆಯಾಗುತ್ತಿದೆ ಎಂದರು.

ಮೈಸೂರು ಮಹಾರಾಜರಾಗಿ ಪಟ್ಟವೇರಿದ ಬಳಿಕ ಇದೇ ಮೊದಲ ಬಾರಿಗೆ ರಾಜಮಾತೆಯೊಂದಿಗೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಮಹಾರಾಜರು ಬೆಳಗ್ಗೆ 11 ಗಂಟೆ ಸುಮಾರಿಗೆ ಮೈಸೂರಿನಿಂದ ಬಂದು ಕಾವು ಮೂಲಕ ಈಶ್ವರ ಮಂಗಳ ತಲುಪಿದರು.

ಭವ್ಯ ಮೆರವಣಿಗೆ...

ರಾಜವಂಶಸ್ಥರನ್ನು ಈಶ್ವರಮಂಗಳ ಪೇಟೆಯಿಂದ ಅಲಂಕೃತ ತೆರೆದ ವಾಹನದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯಲ್ಲಿ ಹನುಮಗಿರಿಗೆ ಕರೆದೊಯ್ಯಲಾಯಿತು.

ರಾಜಮಾತೆಯೊಂದಿಗೆ ಆಂಜನೇಯ ದರ್ಶನ ಮಾಡಿ ಪೂಜೆ ಸಲ್ಲಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಈ ಸಂದರ್ಭ ನವರತ್ನ ಖಚಿತವಾದ ಗದೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಕ್ಷೇತ್ರದ ವತಿಯಿಂದ ರಾಜರಿಗೆ ಸ್ವರ್ಣಲೇಪಿತ ಆಂಜನೇಯ ವಿಗ್ರಹವನ್ನು ನೀಡಿ, ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರದ ವರಾಹ ಮಂಟಪ ನಿರ್ಮಾಣಕ್ಕೆ ಅರಸರು ಭೂಮಿ ಪೂಜೆ ನೆರವೇರಿಸಿದರು. ವಾಲ್ಮೀಕಿ ವಿಹಾರ ಎಂಬ ಹೆಸರಿನ ಮಕ್ಕಳ ಆಶ್ರಮದ ವಿಸ್ತರಿತ ಕಟ್ಟಡ ಮತ್ತು ಶ್ರೀ ಕ್ಷೇತ್ರದ ನಿರಂತರ ಅನ್ನದಾನ ಕಾರ್ಯಕ್ರಮಕ್ಕೆ ರಾಜಮಾತೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಚಿಂತಕ ಸಂತೋಷ್ ಜಿ. ಅವರು ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ಶಾಸಕಿ ಶಕುಂತಳಾ ಶೆಟ್ಟಿ ವಹಿಸಿದ್ದರು. ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಸಿ.ಎಸ್. ಅಶ್ವತ್ಥ ನಾರಾಯಣ, ಬ್ರಹ್ಮಶ್ರೀ ರವೀಶ ತಂತ್ರಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಕರಿ ಭಂಡಾರಿ, ಉಪಾಧ್ಯಕ್ಷ ಶ್ರೀರಾಮ ಪಕ್ಕಳ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ, ಧರ್ಮಶ್ರೀ ಪ್ರತಿಷ್ಠಾನದ ಮಹಾ ಪೋಷಕ ಕೊನೆತೋಟ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಸ್ವಾಗತಿಸಿದರು. ಶಿವರಾಮ ವಂದಿಸಿದರು. ನ್ಯಾಯವಾದಿ ಮಹೇಶ್ ಕಜೆ ಕಾಯಕ್ರಮ ನಿರೂಪಿಸಿದರು.