ಗ್ಯಾಸ್ ಸಿಲಿಂಡರ್ ಸ್ಪೋಟ : ವಾಚಮನ್ ಸಾವು

ಕಲಬುರಗಿ,ಮಾ.5-ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ವಾಚಮನ್ ಒಬ್ಬ ಮೃತಪಟ್ಟ ಘಟನೆ ನಗರದ ದರ್ಗಾ ರಸ್ತೆಯ ಸಂಗತ್ರಾಸವಾಡಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಮೃತನನ್ನು ಶೇಖ್ ಜಲಾಲ್ (55) ಎಂದು ಗುರುತಿಸಲಾಗಿದೆ.

ಮೃತ ಶೇಖ್ ಜಲಾಲ್ ಹೀರೊಹೋಂಡಾ ಶೋರೂಂ ಒಂದರಲ್ಲಿ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ. ಹೀರೋಹೋಂಡಾ ಶೋರೂಂ ಎದುರುಗಡೆ ಇರುವ ವಿನಾಯಕ ಹೋಟೆಲ್ ನಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಹೋಟೆಲ್ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಹೋಟೆಲ್ ಮಾಲೀಕರು ಹೋಟೆಲ್ ಬಾಗಿಲು ತೆರೆದ ಕೆಲ ನಿಮಿಷಗಳಲ್ಲಿಯೇ ಸಿಲಿಂಡರ್ ಸ್ಪೋಟಗೊಂಡಿದ್ದು, ಸಿಲಿಂಡರ್ ತುಣುಕು ಅಲ್ಲಿಯೇ ನೋಡುತ್ತ ನಿಂತಿದ್ದ ವಾಚಮನ್ ಶೇಖ್ ಜಲಾಲ ಕಾಲಿಗೆ ಬಡಿದು ಕಾಲು ಎರಡು ತುಂಡಾಗಿದೆ. ತಕ್ಷಣವೇ ಆತನನ್ನು 108ನಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಿಲಿಂಡರ್ ಸ್ಪೋಟದಿಂದ ಪಕ್ಕದ ಗ್ಯಾರೇಜ್ ಗೂ ಬೆಂಕಿ ತಗುಲಿದ್ದು, ಬೈಕ್ ಗಳು ಸುಟ್ಟಿವೆ. ಸುಮಾರು 3 ರಿಂದ 3 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಐಜಿಪಿ ಸುನಿಲ ಅಗರವಾಲ್, ಎಸ್ಪಿ ಅಮಿತಸಿಂಗ್, ಬ್ರಹ್ಮಪುರ ಪಿಐ ಕೆ.ಎಂ.ಸತೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ

Post Title

ಕೋಟನೂರದಲ್ಲಿ ಸಂಗೀತ ಸಮ್ಮೇಳನ

ಕಲಬುರಗಿ,ಮಾ.5-ಪಂ.ಪಂಚಾಕ್ಷರಿ ಗವಾಯಿಗಳ ಅಂಧರ ಸಂಗೀತ ಕಲಾಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜೇವರ್ಗಿ ರಸ್ತೆಯ ಕೋಟನೂರ (ಡಿ) ಗ್ರಾಮದ ಗುರು ಪುಟ್ಟರಾಜ ಸಂಗೀತ ಭವನದಲ್ಲಿ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ 100ನೇ ಹುಟ್ಟು ಹಬ್ಬದ ಅಂಗವಾಗಿ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ಸೊನ್ನ ಅನ್ನದಾಸೋಹ ಮಠದ ಡಾ.ಶಿವಾನಂದ ಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು. ಡಾ.ಬಾನಂದೂರು ಕೆಂಪಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಮುಖ್ಯಸ್ಥರಾದ ಅಂಜನಾ ಯಾತನೂರ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್, ರೇವಣಸಿದ್ದ ಹಾಳಕಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಮಾರಂಭದ ಸಾನಿಧ್ಯವಹಿಸಿದ್ದ ಡಾ.ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ನಾಡಿಗೆ ಇಂತಹ ಸಂಸ್ಥೆ ಬೇಕಾಗಿತ್ತು. ಸಂಗೀತ ಬೆಳೆಸುವುದಕ್ಕಾಗಿ ಇಂತಹ ಸಂಸ್ಥೆಗಳು ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಗಳಿಗೆ ಮಠದಿಂದ ಯಾವಾಗಲೂ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಸಂಗೀತ ಮನುಷ್ಯನಿಗೆ ಬೇಕು. ಹಿಂದುಸ್ಥಾನಿ ಸಂಗೀತ, ಭಕ್ತಿ ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಅಂಧ ಮಕ್ಕಳ ಸಂಗೀತ ಕೇಳಿ ರೂ.5000/- ನಗದು ಬಹುಮಾನ ನೀಡಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಸಂತಸ ತಂದಿದೆ ಎಂದರು.

ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಸಂಸ್ಥೆಗೆ ತನುಮನ ಧನ ಸಲ್ಲಿಸುವುದಾಗಿ ತಿಳಿಸಿದರು.

ಕಲಾಬಳಗದ ಗೌರವಾಧ್ಯಕ್ಷರಾದ ಸಿದ್ರಾಮ ಪೊಲೀಸ್ ಪಾಟೀಲ ಅವರು ಮಾತನಾಡಿ 2002 ರಿಂದ ಸಂಸ್ಥೆಯು ಬೆಳೆದುಬಂದ ಪ್ರತಿಯೊಂದು ಚಿತ್ರವನ್ನು ಜನರ ಮುಂದಿಟ್ಟರು.

ಸಂಸ್ಥೆ ಬೆಳವಣಿಗೆಗೆ ಕಾರಣರಾದ ತಮ್ಮ ಗುರು ಪುಟ್ಟರಾಜರನ್ನು ಸ್ಮರಿಸಿದರು. ಸಂಗೀತ ಕಲಿಯುವ ಮಕ್ಕಳಿಗೆ ಸಂಗೀತ ಪಾಠ ಹೇಳುವುದಾಗಿ, ಸಂಗೀತ, ಭರತನಾಟ್ಯ ಕಲಿಯಲು ಇಚ್ಛಿಸುವ ಮಕ್ಕಳಿಗೆ ತರಬೇತಿ ನೀಡುವುದಾಗಿ ತಿಳಿಸಿದರು. ಪ್ರತಿ ತಿಂಗಳ 2ನೇ ದಿನಾಂಕದಂದು ಸಂಗೀತ ಕೇಳುವ ಆಸಕ್ತರಿಗೆ ತಿಂಗಳ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡುವುದು ಅವರು ತಿಳಿಸಿದರು.

ಅಂತರಾಷ್ಟ್ರೀಯ ಕಲಾವಿದರಾದ ಡಾ.ಬಾನಂದೂರು ಕೆಂಪಯ್ಯ ಅವರು ಜಾನಪದ ಗೀತೆ ಹಾಡಿದರು.

ಕಲಾವಿದರಾದ ಮಹಾದೇವಪ್ಪ ಹಳ್ಳಿ, ಗುರುನಾಥ ಜಿ.ಸುತಾರ, ಶಂಭುಲಿಂಗ ಪಾಟೀಲ, ದತ್ತರಾಜ ಕಲಶೆಟ್ಟಿ, ಬಾಬುರಾವ ಕೋಬಾಳ, ಶಿವಶಂಕರ ಬಿರಾದಾರ, ಸೂರ್ಯಕಾಂತ ಡುಮ್ಮಾ, ಸೈದಪ್ಪ ಚವಡಾಪೂರ, ಶಂಕರ ದೇಸಾಯಿ ಕಲ್ಲೂರ ಅವರನ್ನು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಜಕುಮಾರ ಬಿ.ಉದನೂರ ಅವರನ್ನು, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಎಸ್.ಪಿ.ಸುಳ್ಳದ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಭೀಮಾರತಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಲ್ಲಯ್ಯ ಗುತ್ತೇದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಶಸ್ತಿ ಪಡೆದ ಸಂಗೀತಗಾರರಿಗೆ ತಲಾ 1001 ರೂ. ನೀಡಿ ಗುರು ಪುಟ್ಟರಾಜ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿ

ಕಲಬುರಗಿ,ಮಾ.5-ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪತಿಯೊಬ್ಬ ಆಕೆಯ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲಗೈದ ಘಟನೆ ಸೇಡಂ ಪಟ್ಟಣದ ಸಣ್ಣ ಅಗಸಿಯಲ್ಲಿ ನಡೆದಿದೆ.

ಸುಜಾತಾ ಮೊಗಲಪ್ಪ ಹನುಮನಹಳ್ಳಿ ಕೊಲೆಯಾದ ಮಹಿಳೆ.

ಸುಜಾತಾ ಮೊಗಲಪ್ಪ ಹನುಮನಹಳ್ಳಿ ಮದುವೆಯಾಗಿ 10 ವರ್ಷಗಳಾಗಿದ್ದು, ಪತಿ ಮೊಗಲಪ್ಪ ಮತ್ತು ಆತನ ಕುಟುಂಬದ ಸದಸ್ಯರು ಫೆ.27 ರಂದು ಸುಜಾತಾ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎನ್ನಲಾಗಿದ್ದು, ತೀವ್ರ ಸುಟ್ಟ ಗಾಯಗಳಾಗಿದ್ದ ಸುಜಾತಾಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಈ ಸಂಬಂಧ ಪತಿ ಮೊಗಲಪ್ಪ, ನಾಗಮ್ಮ, ಮಲ್ಲಮ್ಮ, ಶಾಣಮ್ಮ, ಮಲ್ಲಪ್ಪ, ಅಂಬರೀಶ, ಭೀಮು, ವೆಂಕಟಮ್ಮ, ಶಿವರಾಯ, ತಿಮ್ಮಮ್ಮ ಅವರ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ನಗರದಲ್ಲಿ ಹೋಳಿ ಸಂಭ್ರಮ

ಕಲಬುರಗಿ,ಮಾ.5-ನಗರದಲ್ಲಿಂದು ಬಣ್ಣಗಳ ಹಬ್ಬ ಹೋಳಿಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ.

ನಗರದ ಹಲವು ಬಡಾವಣೆಗಳಲ್ಲಿ ಮಕ್ಕಳು ಪರಸ್ಪರ ಬಣ್ಣ ಬಳಿದುಕೊಂಡು, ಬಣ್ಣ ಎರಚಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ನಗರದ ಬಂಬೂ ಬಜಾರ ನ್ಯೂ ಭೋವಿಗಲ್ಲಿಯಲ್ಲಿ ಕಲಬುರಗಿ ಭೋವಿ ಸಮಾಜದ ವತಿಯಿಂದ ಹೋಳಿ ಹಬ್ಬದ 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು.

ಮಾಜಿ ಸಂಸದ ಡಾ.ಬಿ.ಜಿ.ಜವಳಿ, ಬಿಜೆಪಿ ಮುಖಂಡರಾದ ಬಿ.ಜಿ.ಪಾಟೀಲ, ನಿತೀನ್ ಜವಳಿ, ಕಲಬುರಗಿ ಭೋವಿ ಸಮಾಜದ ಅಧ್ಯಕ್ಷ ಜಯಪ್ರಕಾಶ ಸಗರಕರ್, ಮಹಾನಗರ ಪಾಲಿಕೆ ಸದಸ್ಯ ಶರಣಕುಮಾರ ಮೋದಿ, ಮೇದಾ ಸಮಾಜದ ಅಧ್ಯಕ್ಷ ಸುಭಾಷ ಸಾಳೂಂಕೆ, ಟ್ರೇಬಿನಾನ್ ಸದಸ್ಯರಾದ ರಮೇಶ ಕಮಲಾಪೂರ, ಆಶ್ರಯ ಯೋಜನೆ ಸದಸ್ಯ ಶಿವಾಜಿ ಸೂರ್ಯವಂಶಿ, ಕುರುಬ ಸಮಾಜದ ಮುಖಂಡ ಕೃಷ್ಣಪ್ಪ ಪೂಜಾರಿ ಸೇರಿದಂತೆ ಮತ್ತಿತರ ಗಣ್ಯರು ಪರಸ್ಪರ ಬಣ್ಣ ಎರಚುವುದರ ಮೂಲಕ ಹೋಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.

ನಗರದ ಬಹುತೇಕ ಕಡೆ ಇಂದು ರಾತ್ರಿ ಕಾಮದಹನ ನಡೆಯಲಿದ್ದು, ನಾಳೆ ದುಲಂಡಿ ಆಚರಿಸಲಾಗುತ್ತದೆ.

ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ನಿನ್ನೆಯಿಂದ ಮದ್ಯ ಮಾರಾಟ ನಿಷೇಧಿಸಿದ್ದು, ಹೋಳಿ ಹಬ್ಬವನ್ನು ಶಾಂತಿಯಿಂದ ಆಚರಿಸಲು ನಾಗರಿಕರಲ್ಲಿ ಮನವಿ ಮಾಡಿದೆ.

150 ಚೀಲ ಪಡಿತರ ಗೋಧಿ ಜಪ್ತಿ

ಕಲಬುರಗಿ,ಮಾ.5-ಪಡಿತರ ಗೋಧಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 150 ಚೀಲ ಪಡಿತರ ಗೋಧಿ ಜಪ್ತಿ ಮಾಡಿದ್ದಾರೆ.

ನಗರದ ನೆಹರು ಗಂಜ್ ನ ಎಪಿಎಂಸಿ ಹತ್ತಿರ ಲಾರಿ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೌಕ್ ಠಾಣೆ ಪಿಐ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಗುವಿವಿ ಉಪ ಕುಲಪತಿ ಹುದ್ದೆ ಸ್ಥಳೀಯರಿಗೆ ನೀಡಿ: ಜೈಕರವೇ

ಕಲಬುರಗಿ,ಮಾ.5- ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಖಾಲಿ ಇರುವ ಉಪ ಕುಲಪತಿ ಹುದ್ದೆಯನ್ನು ಕಲಂ.371(ಜೆ) ಮೀಸಲಾತಿಯಡಿ ಸ್ಥಳೀರ ಅರ್ಹರನ್ನೆ ನೇಮಕ ಮಾಡುವಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಮಂಜುನಾಥ ಬಿ.ಹಾಗರಗಿ ಅವರು ಒತ್ತಾಯಿಸಿದ್ದಾರೆ.

ಉಪ ಕುಲಪತಿ ಹುದ್ದೆ ಬಹುದಿನಗಳಿಂದ ಇಲ್ಲಿ ಖಾಲಿ ಇದ್ದು, ಹಂಗಾಮಿ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ, ಇದರಿಂದ ಗುವಿವಿಯ ಮಹಾತ್ವದ ನಿರ್ಣಯ ಕೈಗೊಳ್ಳಲು ತೊಂದರೆಯಾಗುತ್ತಿದಲ್ಲದೇ ವಿಶ್ವವಿದ್ಯಾಲಯದ ಕಾರ್ಯಭಾರಕ್ಕೆ ಅಡ್ಡಿಯೂ ಆಗುತ್ತಿದ್ದು, ರಾಜ್ಯಪಾಲರು ಈ ಹುದ್ದೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ಅರ್ಹರನ್ನೆ ನೇಮಕ ಮಾಡಬೇಕು ಎಂದು ಒತ್ತಾಯಿಸಿರುವ ಅವರು, ಒಂದು ವೇಳೆ ಸ್ಥಳೀಯರನ್ನು ಕಡೆಗಣಿಸಿದ್ದಲ್ಲಿ ಜೈಕರವೇ ನೇತೃತ್ವದಲ್ಲಿ ಗುವಿವಿ ಕಾರ್ಯಾಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರದಲ್ಲಿ ಹಾಗರಗಿ ಅವರು ತಿಳಿಸಿದ್ದಾರೆ.