ಭಿನ್ನಮತ ಕೆಂಡ

ಜಗ್ಗದ ಜಾರಕಿಹೊಳಿ, ತಗ್ಗದ ಅತೃಪ್ತಿ ಹೊಗೆ

ಬೆಂಗಳೂರು, ಜ. ೨೯- ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸತೀಶ್ ಜಾರಕಿಹೊಳಿ ಸಂಧಾನಕ್ಕೆ ಬಗ್ಗದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಬ್ಬಿಬ್ಬುಗೊಳಿಸಿದೆ.

ಇಂದು ಬೆಂಗಳೂರಿಗೆ ಆಗಮಿಸಬೇಕಾಗಿದ್ದ ಜಾರಕಿಹೊಳಿ ಗೋಕಾಕ್‌ನಲ್ಲಿ ಉಳಿದಿರುವುದು ರಾಜೀನಾಮೆ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗುವಂತಾಗಿದೆ. ಈಗ ಉಂಟಾಗಿರುವ ರಾಜೀನಾಮೆ ಬಿಕ್ಕಟ್ಟನ್ನು ಮುಖ್ಯಮಂತ್ರಿ ವಿರುದ್ಧ ಅಸ್ತ್ರವಾಗಿ ಬಳಸಲು ಪಕ್ಷದಲ್ಲಿನ ಭಿನ್ನಮತೀಯರು ಸನ್ನದ್ಧರಾಗಿದ್ದಾರೆ.

ಎಐಸಿಸಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಮ್ಮುಖದಲ್ಲಿ ನಾಳೆಯಿಂದ ಪ್ರಾರಂಭವಾಗುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿ ಸಿದ್ದು ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಹೋರಾಟಕ್ಕೆ ಭಿನ್ನರು ಕಾರ್ಯತಂತ್ರ ರೂಪಿಸಿದ್ದಾರೆ.

ಸಿದ್ದು ಅವರೊಂದಿಗೆ ಮಾತುಕತೆಗೆ ಮುಂದಾಗದೆ ಗೋಕಾಕ್‌ನಲ್ಲಿ ಉಳಿದಿರುವ ಜಾರಕಿಹೊಳಿ ಪರವಾಗಿ ಶಾಸಕ ಫಿರೋಜ್ ಸೇಟ್, ವಿಧಾನಪರಿಷತ್ ಸದಸ್ಯ ವೀರಕುಮಾರ್ ಪಾಟೀಲ್, ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಹಾಗೂ ಮತ್ತಿತರರು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಜಾರಕಿಹೊಳಿಯ ಮನದಾಳದ ಮಾತುಗಳನ್ನು ಮನವರಿಕೆ ಮಾಡಿಕೊಡಲಿದ್ದಾರೆ. ನಿನ್ನೆ ಅವರೊಂದಿಗೆ ನಡೆಸಿದ ಮಾತುಕತೆಯ ವಿವರವನ್ನು ಸಿದ್ದು ಹಾಗೂ ಪಕ್ಷದ ಅಧ್ಯಕ್ಷ ಪರಮೇಶ್ವರ್ ಅವರಿಗೆ ವಿವರಿಸಲಿದ್ದಾರೆ..

ಜಾರಕಿಹೊಳಿ ಅವರಿಗೆ ಸಮಾಜಮುಖಿ ಖಾತೆ ನೀಡಿ ಬಿಕ್ಕಟ್ಟು ಬಗೆಹರಿಸಲು ಮುಂದಾಗುವಂತೆ ಬೆಳಗಾವಿ ಜಿಲ್ಲಾ ನಾಯಕರು ಸಿ.ಎಂ. ಅವರಿಗೆ ಮನವಿ ಮಾಡಲಿದ್ದಾರೆ.

ಬೆಂಗಳೂರಿಗೆ ಬರುವಂತೆ ನೀಡಿದ್ದ ಆಹ್ವಾನವನ್ನು ಜಾರಕಿಹೊಳಿ ತಿರಸ್ಕರಿಸಿ ಗೋಕಾಕ್‌ನಲ್ಲಿ ಉಳಿದಿರುವುದು ಸಿದ್ದು ಅವರನ್ನು ಕೆರಳಿಸಿದೆ. ಈ ದಿಸೆಯಲ್ಲಿ ಮುಖ್ಯಮಂತ್ರಿ ಕೈಗೊಳ್ಳುವ ನಿರ್ಧಾರ ಕುತೂಹಲ ಕೆರಳಿಸಿದೆ.

Post Title

ಮಾವೋವಾದಿಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿ ಧ್ವಂಸ

ಕೊಚ್ಚಿ, ಜ. ೨೯- ನಿಷೇಧಿತ ಮಾವೋವಾದಿಗಳು ಇಂದು ಬೆಳಿಗ್ಗೆ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಧ್ವಂಸಗೊಳಿಸಿದೆ.

ಇಲ್ಲಿಯ ಕಲಮಸ್ಸೆರಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ನುಗ್ಗಿದ ಮಾವೋವಾದಿಗಳ ಗುಂಪು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಕೆಲವು ಕಡತಗಳನ್ನು ಹರಿದು ಬಿಸಾಡಲಾಗಿದೆ. ಕೆಲವಕ್ಕೆ ಬೆಂಕಿ ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ 9ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಆ ಭಾಗದಲ್ಲಿ ಮಾವೋವಾದಿ ಸಂಘಟನೆಗೆ ಸೇರಿದ ಕರಪತ್ರಗಳು ಅಲ್ಲಲ್ಲಿ ಬಿದ್ದಿವೆ.

ಇತ್ತೀಚಿಗೆ ತಾನೆ ಪ್ರವಾಸಿ ತಾಣದ ಮೇಲೆ ಮಾವೋವಾದಿಗಳು ದಾಳಿ ನಡೆಸಿರುವುದು ಇನ್ನೂ ಹಸಿರಾಗಿರುವಾಗಲೇ ಕಚೇರಿ ಮೇಲೆ ಈ ದಾಳಿ ನಡೆದಿದೆ.

ಆರು ಮಂದಿ ಮುಸುಕುಧಾರಿ ಮಾವೋವಾದಿಗಳು ಐವಾ ಕೇರಳ ಪ್ರವಾಸೋದ್ಯಮ ರೆಸಾರ್ಟ್‌ಗೆ ನುಗ್ಗಿ ಭಾರಿ ದಾಂಧಲೆ ನಡೆಸಿತ್ತು.

ದಾಳಿ ನಂತರ ಮಾವೋವಾದಿಗಳು ಪರಾರಿಯಾಗಿದ್ದು, ಪೊಲೀಸರು ಮತ್ತು ತನಿಖಾ ತಂಡಗಳು ಸ್ಥಳ ಸುತ್ತುವರಿದು ಪರಿಶೀಲಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮತದಾರನ ಮನ ಗೆಲ್ಲಲು ಸಂಗೀತ, ನೃತ್ಯ ಮೋಡಿ

ನವದೆಹಲಿ, ಜ. ೨೯- ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಎ‌ಎಪಿ, ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಱ್ಯಾಲಿ, ಭಾಷಣಗಳಿಗಷ್ಟೇ ಮೊರೆ ಹೋಗದೆ ಮತದಾರರ ಮನಗೆಲ್ಲಲು ಸಂಗೀತ, ನೃತ್ಯ ಸೇರಿದಂತೆ ಅನ್ಯ ಮಾರ್ಗಗಳತ್ತಲೂ ಮುಖ ಮಾಡಿದೆ.

ಪ್ಲೇ ಫಾರ್ ಚೇಂಜ್ ಮತ್ತು ಡ್ಯಾನ್ಸ್ ಫಾರ್ ಡೆಮಾಕ್ರಸಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರ ಮನಸೆಳೆಯಲು ಹರಸಾಹಸ ನಡೆಸುತ್ತಿವೆ.

ಸ್ವಯಂ ಸೇವಕರು ಗಿಟಾರ್ ಹಿಡಿದು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕೇಜ್ರಿ ಪರ ಪ್ರಚಾರ ನಡೆಸಿದರೆ, ಖ್ಯಾತ ಗಾಯಕ ವಿಶಾಲ್ ದದ್‌ಲಾನಿ ಎಎಪಿ ಪರ ಗೀತೆಗಳನ್ನು ಹಾಡಿ ಜನಸಾಮಾನ್ಯರನ್ನು ರಂಜಿಸುವ ಮೂಲಕ ಪ್ರಚಾರ ನಡೆಸಿದರು.

ಪ್ರತಿದಿನ ಸ್ವಯಂ ಸೇವಕರು ನಗರದ ವಿವಿಧೆಡೆ ಸಂಚರಿಸುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.

ವಿಭಿನ್ನ ರೀತಿಯ ಪ್ರಚಾರದಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ, ಬಿಜೆಪಿ ಪರ ಬಾಲಿವುಡ್ ನಟ ವಿರೇಶ್ ರಾನಾಲ್ ಬಾಬಾ ರಾಂದೇವ್ ಸೇರಿದಂತೆ ಅನೇಕರು ಪ್ರಚಾರದಲ್ಲಿ ತೊಡಗಿದ್ದಾರೆ.

ದೆಹಲಿ ನಗರದಾದ್ಯಂತ 60ಕ್ಕೂ ಹೆಚ್ಚು `ಸೆಲ್ಫಿ ವಿತ್ ಮೋದಿ` ಸ್ಟಾಲ್‌ಗಳು ತಲೆ ಎತ್ತಿವೆ. ಕಾಂಗ್ರೆಸ್ ಪಾದಯಾತ್ರೆ ಮತ್ತು ರೋಡ್ ಶೋಗಳ ಮೂಲಕ ಮತ ಯಾಚನೆ ನಡೆಸಿದೆ.