ಬಳ್ಳಾರಿಯಲ್ಲಿ ಭಾರೀ ಮಳೆ - ಹಾಳಾದ ರಸ್ತೆಗಳು: ತುಂಬಿ ಹರಿದ ಅಂಡರ್ ಬ್ರಿಡ್ಜ್ ರಸ್ತೆಗಳು

ಬಳ್ಳಾರಿ, ಮೇ.30: ಬಳ್ಳಾರಿ ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಹಾಗೂ ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ, ಕೆಲವು ಕಡೆ ಆಲಿಕಲ್ಲು ಮಳೆ ಬಿದ್ದ ವರದಿಯಾಗಿದೆ.

ಬಿರು ಬೇಸಿಗೆಯ ಬಿಸಲಿನಿಂದ ತತ್ತರಿಸಿದ್ದ, ಬಿಸಿಲಿನ ಝಳಕ್ಕೆ ಬಳಲಿ ಬೆಂಡಾಗಿದ್ದ ಜನತೆಗೆ, 42-43 ಡಿಗ್ರೀ ಸೆಲ್ಸಿಯಸ್ ನಷ್ಟು ಬಿಸಿಲಿನ ಪ್ರಖರವಿದ್ದ ಬಳ್ಳಾರಿಯಲ್ಲಿ ಕಳೆದ ರಾತ್ರಿ ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ಸುರಿದ ಭಾರೀ ಮಳೆಯು ತಂಪಿನ ಅನುಭವ ನೀಡಿತ್ತು.

ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ, ರಸ್ತೆಗಳ ಮೇಲೆ ನೀರು ನುಗ್ಗಿ ಹರಿದಿದ್ದರಿಂದ, ಡಾ|| ಜೋಳದರಾಶಿ ದೊಡ್ಡನಗೌಡರ ರಂಗಮಂದಿರದ ಬಳಿಯ ಅಂಡರ್ ಬ್ರಿಡ್ಜ್, ದುರ್ಗಮ್ಮ ದೇವಸ್ಥಾನದ ಬಳಿಯ ಅಂಡರ್ ಬ್ರಿಡ್ಜ್ ಹಾಗೂ ಎಸ್.ಎನ್.ಪೇಟೆಗಳಲ್ಲಿನ ಅಂಡರ್ ಬ್ರಿಡ್ಜ್ ಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ರಂಗಮಂದಿರ ಬಳಿಯ ಅಂಡರ್ ಬ್ರಿಡ್ಜ್ ರಸ್ತೆಯಲ್ಲಿ ಇಂದು ಮಧ್ಯಾಹ್ನವಾದರೂ ನೀರು ಸಂಗ್ರಹಗೊಂಡಿದ್ದುದು, ದ್ವಿಚಕ್ರವಾಹನ, ಆಟೋ ಮತ್ತಿತರೆ ಸವಾರರು, ಪ್ರಯಾಣೀಕರು ತೀವ್ರ ಕಿರಿಕಿರಿ-ಅನುಭವಿಸುವಂತಾಗಿದೆ.

ಹೊಸ ಬಸ್ ನಿಲ್ದಾಣದ ಎದುರುಗಡೆಯಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆದಿರುವುದರಿಂದ ಆಳವಾಗಿ ಅಗೆದಿರುವ (ತೋಡಿರುವ) ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದು, ಹೊಲಸು-ಹೊಲಸಾದ ಈ ರಸ್ತೆಯಲ್ಲಿ ಅಡ್ಡಾಡಲು ಸಾರ್ವಜನಿಕರು, ಓಡಾಡಲು ವಾಹನ ಸವಾರರು ಪರದಾಡುವಂತಾಗಿದೆ.

ಕೆ.ಎಸ್.ಆರ್.ಟಿ.ಸಿ ಬಸ್ಸುಗಳೆಲ್ಲವೂ ಬಸ್ ಸ್ಟಾಂಡ್ ಗೆ ತೆರಳಲು ಈ ಮಾರ್ಗದಲ್ಲಿ ಆಗಮಿಸಬೇಕಾಗಿರುವುದರಿಂದ, ಬಸ್ ನ ಓಡಾಟದಿಂದಾಗಿ ರಸ್ತೆಯ ಮೇಲಿನ ಹೊಲಸು ನೀರು ಚಿಮ್ಮಿ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಿಡಿಯುವಂತಾಗಿ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಬಳ್ಳಾರಿ ನಗರದಲ್ಲಿನ ರಿಪೇರಿ ಕಾಣುತ್ತಿರುವ ರಸ್ತೆಗಳಂತೂ ಮತ್ತಷ್ಟು ಹಾಳಾಗಿ ನಿಂತು ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Post Title

ಮೇಯರ್ ವಿವಿಧ ಪ್ರದೇಶಗಳಿಗೆ ಭೇಟಿ ಪರಿಶೀಲನೆ

ಬಳ್ಳಾರಿ, ಮೇ.30:ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ನಾಗಮ್ಮ ಚಂದ್ರ, ಮತ್ತಿತರರು ನಗರದ 7, 8ನೇ ವಾರ್ಡ್ ಗಳ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

7ನೇ ಮತ್ತು 8ನೇ ವಾರ್ಡ್ ಗಳ ವ್ಯಾಪ್ತಿಯಲ್ಲಿ ಬರುವ ಬಾಪೂಜಿ ನಗರ, ಅಂದ್ರಾಳ್ ಮತ್ತಿತರೆ ಪ್ರದೇಶಗಳಿಗೆ ಭೇಟಿ ನೀಡಿದ ಮಹಾಪೌರರಾದ ಶ್ರೀಮತಿ ನಾಗಮ್ಮ ಚಂದ್ರ, ಆ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರಲ್ಲದೇ, ಆಯಾ ಪ್ರದೇಶಗಳ ನಾಗರೀಕರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ಪಿ.ಜಿ.ರಮೇಶ್, ಪಾಲಿಕೆಯ ಸದಸ್ಯರಾದ ಬೆಣಕಲ್ ಬಸವರಾಜಗೌಡ, ಶ್ರೀಮತಿ ಉಮಾದೇವಿ, ವಿ.ಶಿವರಾಜ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದ್ರ, ಶಿವರಾಜ್, ಪಾಲಿಕೆಯ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ಪಾಲಿಕೆಯ ಆಯುಕ್ತ ಪಿ.ಜಿ.ರಮೇಶ್ ಮಾತನಾಡಿ, ಪಾಲಿಕೆಯ ವತಿಯಿಂದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ಸಮರ್ಪಕ ಸರಬರಾಜು, ಪರಿಸರ ಶುಭ್ರತೆ ಹಾಗೂ ಒಳ ಚರಂಡಿ ಕಾಮಗಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹ ಪಾಲಿಕೆಯ ಆಡಳಿತದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕುಲಪತಿಗಳ ನೇಮಕಕ್ಕೆ ಒತ್ತಾಯ

ಬಳ್ಳಾರಿ, ಮೇ.30:ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕೂಡಲೇ ಪೂರ್ಣಾವಧಿ ಕುಲಪತಿಗಳನ್ನು ನೇಮಿಸಬೇಕು ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಶ್ವ ವಿದ್ಯಾಲಯಗಳಿಗೆ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿಯ ವರದಿಯನ್ನು ಪಡೆದು ಹಲವು ತಿಂಗಳು ಕಳೆದರೂ ನೇಮಕವೇ ಆಗದಿರುವುದು ಅನುಮಾನಗಳಿಗೆ ದಾರಿ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಲಪತಿಗಳ ನೇಮಕಾತಿ ವಿಳಂಬವಾಗಿರುವುದರಿಂದ ವಿಶ್ವವಿದ್ಯಾಲಯಗಳಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ ಕಲಬುರ್ಗಿ ವಿವಿ, ಮತ್ತು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಸ್ಥಾನ ಖಾಲಿಯಾಗಿ ತಿಂಗಳುಗಳಾಗಿವೆ ಎಂದು ದೂರಿದರು.

ಮುಖಂಡರಾದ ಕೆ.ಎಱ್ರಿಸ್ವಾಮಿ, ಸಿದ್ದರಾಮಪ್ಪ ಸಿರಿಗೇರಿ, ಕೆ.ವೆಂಕಟೇಶಲು ಶೆಟ್ಟಿ, ಜಿ.ಸುಧಾಕರ್, ಫಯಾಜ್ ಭಾಷಾ, ಶ್ರೀನಿವಾಸ್, ಎಸ್.ಎಂ.ಸುಬಾನ, ಜಿಲ್ಲೆ ಹನುಮಂತಪ್ಪ, ಸಾಗರ, ದ್ಯಾಮಪ್ಪ ದೇಸಾಯಿ, ಭೀಮಲಿಂಗ, ಗಾದೆಪ್ಪ ಚಾನಳ್, ದೊಡ್ಡಬಸಪ್ಪ ಚಾನಳ್, ಹರಿ, ಜಿಲಾನ್ ಹಾಜರಿದ್ದರು.

ಸಿಂಡಿಕೇಟ್ ಬ್ಯಾಂಕ್ ನಿಂದ ಸಾಲ ಮಂಜೂರಾತಿ ಪತ್ರಗಳ ವಿತರಣೆ

ಬಳ್ಳಾರಿ, ಮೇ.30:ನಗರದ ಬೆಂಗಳೂರು ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನ ಮುಖ್ಯ ಶಾಖೆಯ ಆವರಣದಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವು ನಿನ್ನೆ ಸಂಜೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿಯ ಸಹಾಯಕ ಮಹಾ ಪ್ರಬಂಧಕರಾದ ಎಸ್.ಎಂ.ದೇಸಾಯಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಹಕರು ಮತ್ತು ಬ್ಯಾಂಕಿನ ನಡುವಿನ ಸಂಬಂಧವನ್ನು ವೃದ್ಧಿಸಲು ಸಹಾಯಕವಾಗುತ್ತದೆ. ತಮ್ಮ ಅಧಿಕಾರಾವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿ, ಬಳ್ಳಾರಿಯು ಸಾಧಿಸಿದ ಪ್ರಗತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಬರುವ ಮಾರ್ಚ್ 2016ರ ವೇಳೆಗೆ ಇನ್ನೂ ಹೊಸ ಮೈಲಿಗಲ್ಲುಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದರು.

ಸಿಂಡಿಕೇಟ್ ಬ್ಯಾಂಕ್ ನ ಮುಖ್ಯ ಶಾಖೆಯ ಮುಖ್ಯ ಪ್ರಬಂಧಕರಾದ ರವಿಶಂಕರ್ ಅವರು ಬ್ಯಾಂಕಿನ ಸ್ಥಾಪನೆ, ಹಾಗೂ ಅದರ ಪ್ರಗತಿಯ ಚಿತ್ರಣವನ್ನು ಗ್ರಾಹಕರು, ನಾಗರೀಕರಿಗೆ ತಿಳಿಸಿ, ಸರ್ವರನ್ನು ಸ್ವಾಗತಿಸಿದರು, ಮುಖ್ಯ ಶಾಖೆಯ ವ್ಯವಹಾರ 200 ಕೋಟಿ ರೂ.ಗಳ ಗಡಿ ದಾಟಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಯಶಸ್ವಿಯಾಗಿ ಜಾರಿಗೆ ತಂದಿರುವ ಸುರಕ್ಷಾ ಬೀಮಾ ಯೋಜನೆ, ಜೀವನಜ್ಯೋತಿ ಬೀಮಾ ಯೋಜನೆ, ಅಟಲ್ ಪೆನ್ ಷನ್ ಯೋಜನೆ ಮತ್ತಿತರೆ ಯೋಜನೆಗಳ ಬಗೆಗೆ ವಿವರಿಸಲಾಯಿತಲ್ಲದೇ ಅವುಗಳ ಸದುಪಯೋಗ ಪಡೆದುಕೊಳ್ಳಲು ಗ್ರಾಹಕರಲ್ಲಿ ಮನವಿ ಮಾಡಲಾಯಿತು.

ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆ, ರಾಯಲ್ ಸರ್ಕಲ್ ಶಾಖೆ, ಹಗರಿ ಶಾಖೆ ಹಾಗೂ ಹಲಕುಂದಿ ಶಾಖೆಗಳಿಂದ ಮಧ್ಯಮ ಮತ್ತು ಸಣ್ಣ, ಚಿಲ್ಲರೆ ವ್ಯಾಪಾರಸ್ಥರಿಗೆ ಮಂಜೂರಾದ ವಿವಿಧ ಸಾಲ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಉದ್ಯಮಿ ಚಲ್ಲೂರು ಪ್ರಕಾಶ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಗ್ರಾಹಕರು ತಾವು ಪಡೆದ ಸಾಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡು, ತಮ್ಮ ವ್ಯಾಪಾರ, ವ್ಯವಹಾರ ವೃದ್ಧಿಸಿಕೊಂಡು, ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.

ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಬಳ್ಳಾರಿ ಇದರ ನಿರ್ದೇಶಕರಾದ ಪಕ್ಕೀರೇಶ್ ಬಾಳೇಕಾಯಿ ಅವರು ತಮ್ಮ ಸಂಸ್ಥೆಯ ವತಿಯಿಂದ ನೀಡುವ ಉಚಿತ ತರಬೇತಿ ಕಾರ್ಯಕ್ರಮಗಳ ಬಗೆಗೆ ವಿವರಿಸಿದರು.

ಸಿಂಡಿಕೇಟ್ ಬ್ಯಾಂಕ್ ನ ರಾಯಲ್ ಸರ್ಕಲ್ ಶಾಖೆಯ ಹಿರಿಯ ಪ್ರಬಂಧಕ ಕೃಷ್ಣರಾವ್, ಹಗರಿ ಶಾಖೆಯ ಮೆನೇಜರ್ ಶ್ರೀನಿವಾಸಮೂರ್ತಿ, ಹಲಕುಂದಿ ಶಾಖೆಯ ಮೆನೇಜರ್ ಪ್ರಿಯವರ್ತ ನಾರಾಯಣ್, ಮತ್ತು ಇತರೆ ಪ್ರಮುಖರು, ಗ್ರಾಹಕರು ಪಾಲ್ಗೊಂಡಿದ್ದರು, ಕೃಷ್ಣರಾವ್ ಅವರು ಕೊನೆಯಲ್ಲಿ ವಂದಿಸಿದರು.

ಒಳ ಚರಂಡಿ ನೀರು ಹರಿದು ಅವ್ಯವಸ್ಥೆ

ಬಳ್ಳಾರಿ, ಮೇ.30:ನಗರದ 19ನೇ ವಾರ್ಡ್ ಪ್ರದೇಶದ ವ್ಯಾಪ್ತಿಯ ಗೊಲ್ಲ ನರಸಪ್ಪ ಕಾಲೋನಿ, ನಿಜಲಿಂಗಪ್ಪ ಕಾಲೋನಿಗಳ ನಡುವಿನ ಪ್ರದೇಶದಲ್ಲಿ ಒಳ ಚರಂಡಿ ಪೈಪ್ ಗಳಲ್ಲಿ ನೀರು ಹೊರ ಬಂದು, ಕೆಲವೆಡೆ ನಾಗರೀಕರ ಮನೆಗಳಿಗೂ ಈ ನೀರು ಪ್ರವೇಶಿಸಿ, ಹೊಲಸು ದುರ್ವಾಸನೆ ಹರಡಿದ್ದು ನಾಗರೀಕರು ತೀವ್ರ ಸಂಕಟ, ಕಿರಿಕಿರಿ ಅನುಭವಿಸುವಂತಾಗಿದೆ.

ಈ ಭಾಗದಲ್ಲಿ ಕಳೆದ ಒಂದೆರಡು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದ್ದು, ನಗರಪಾಲಿಕೆ-ಜಲಮಂಡಳಿಯವರು ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ನಾಗರೀಕರು ಕೋರಿದ್ದಾರೆ.

ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿ ಮತ್ತು ದುರಸ್ತಿಗಾಗಿ 28 ಲಕ್ಷ ರೂಪಾಯಿಗಳ ಯೋಜನೆಗೆ ನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ದೊರೆತು ತಿಂಗಳುಗಳೇ ಉರುಳಿ ಹೋಗಿವೆ.

ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ, ಒಳ ಚರಂಡಿ ವ್ಯವಸ್ಥೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಕೋರಿದ್ದಾರೆ. ನಗರಪಾಲಿಕೆಯ ಅಧಿಕಾರಿಗಳು ಸೇರಿದಂತೆ ಕಾಂಗ್ರೆಸ್ ಧುರೀಣ ಕೃಷ್ಣ (ಕಿಟ್ಟು) ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಶಾಶ್ವತ ಪರಿಹಾರ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವಂತೆ ನಾಗರೀಕರು ಮನವಿ ಮಾ‌ಡಿದ್ದಾರೆ.

ಬಂಡ್ರಿ: ಅಕ್ರಮ ಮದ್ಯ ಮಾರಾಟ-540/- ರೂ ಮೌಲ್ಯದ ಮದ್ಯವಶ

ಕೂಡ್ಲಿಗಿ, ಮೇ.30:ಸರ್ಕಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಕೂಡ್ಲಿಗಿ ಪೊಲೀಸರು ದಾಳಿ ನಡೆಸಿ 540/- ರೂ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಕೂಡ್ಲಿಗಿ ಪೊಲೀಸ ಠಾಣಾ ಸರಹದ್ದಿನ ಸಂಡೂರು ತಾಲೂಕು ಬಂಡ್ರಿ ಗ್ರಾಮದಲ್ಲಿ ಗುರುವಾರ ರಾತ್ರಿ 8.45 ಗಂಟೆಗೆ ಜರುಗಿದೆ.

ಬಂಡ್ರಿ ತಿಮ್ಮೇಶ್ (28) ಅಕ್ರಮ ಮದ್ಯಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ಅಕ್ರಮ ಮದ್ಯ ಮಾರಾಟ ಮಾಡುವುದ ಸುಳಿವು ಹಿಡಿದು ಕೂಡ್ಲಿಗಿ ಪಿಎಸ್ಐ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಲಾಗಿ ಬಿಯರ್ ಬಾಟಲ್ ಹಾಗೂ ಟೆಟ್ರಾ ಫ್ಯಾಕ್ ಗಳಿರುವ 540/- ರೂ ಮೌಲ್ಯದ ಅಕ್ರಮ ಮದ್ಯವನ್ನು ಹಾಗೂ ಆರೋಪಿ ತಿಮ್ಮೇಶ್ ನನ್ನು ವಶಕ್ಕೆ ತೆಗೆದುಕೊಂಡು ಸರ್ಕಾರದ ಪರವಾಗಿ ಪಿಎಸ್ಐ ಮಹಾಂತೇಶ್ ನೀಡಿದ ದೂರಿನಂತೆ ಮುಖ್ಯಪೇದೆ ರಾಮಾನಾಯ್ಕ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಲಿಬೆಂಚಿ ಗ್ರಾಮದಲ್ಲಿ ಹಬ್ಬಗಳ ಆಚರಣೆಗೆ ನಿಷೇಧ

ಬಳ್ಳಾರಿ, ಮೇ.30:ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮುಂದಿನ ತಿಂಗಳು ಜೂನ್ 2ರಂದು ನಡೆಯುವ ಕಾರು ಹುಣ್ಣಿಮೆ ಹಾಗೂ ಜೂನ್ 16ರಂದು ಜರುಗುವ ಮಣ್ಣೆತ್ತಿನ ಅಮವಾಸ್ಯೆ ಹಬ್ಬಗಳನ್ನು ನಿಷೇಧಿಸಲಾಗಿದೆ.

ಜಿಲ್ಲಾಧಿಕಾರಿಗಳು ಸಂ: ಕಂ/ಎಂ.ಎ.ಜಿ/ ಕಾಸು/11/2015-16, ದಿನಾಂಕ 22-5-2015ರಂದು ಆದೇಶ ಹೊರಡಿಸಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಳ್ಳಾರಿ ತಾಲೂಕಿನ ಜಾರಿಬೆಂಚಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಹಾಗೂ ಮಣ್ಣೆತ್ತಿನ ಅಮವಾಸ್ಯೆ ಹಬ್ಬಗಳ ಆಚರಣೆಯನ್ನು ನಿಷೇಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಿಬೆಂಚಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಹಾಗೂ ಮಣ್ಣೆತ್ತಿನ ಅಮವಾಸ್ಯೆ ಹಬ್ಬಗಳನ್ನು ಆಚರಣೆ ಮಾಡಬಾರದು ಎಂದು ಮೋಕಾ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣನವರು ಗ್ರಾಮದ ಜನತೆಯಲ್ಲಿ ಮನವಿ ಮಾಡಿದ್ದಾರೆ, ಆಕಸ್ಮಿಕವಾಗಿ ಗ್ರಾಮದಲ್ಲಿ ಸದರಿ ಹಬ್ಬಗಳನ್ನು ಆಚರಣೆ ಮಾಡಿದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಎಟಿಎಂ ಕಾರ್ಡ್ ನಿಂದ ಹಣ ಹೊಡೆಯುವ ವಿಫಲ ಯತ್ನ

ಬಳ್ಳಾರಿ, ಮೇ.30:ನಿಮ್ಮ ಎಟಿಎಂ ಕಾರ್ಡ್ ಅಪ್ ಡೇಟ್ ಮಾಡಬೇಕಾಗಿದ್ದು ಕಾರ್ಡ್ ನ ಸಂಖ್ಯೆ ತಿಳಿಸಿ ಎಂದು ಗ್ರಾಹಕರೊಬ್ಬರಿಗೆ ಫೋನಾಯಿಸಿ, ಹಣ ಹೊಡೆಯುವ ಪ್ರಯತ್ನ ವಿಫಲಗೊಂಡಿದೆ. ಬ್ಯಾಂಕ್ ಗ್ರಾಹಕರು ತಕ್ಷಣವೇ ಎಚ್ಚೆತ್ತುಕೊಂಡು ಜಾಗೃತರಾದ್ದರಿಂದ ಹಣ ಲಪಟಾಯಿಸುವ ಖದೀಮನ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ ಅನಿಲ್ ಕುಮಾರ್ ಅವರು ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಎಟಿಎಂ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಇತ್ತೀಚೆಗೆ ಅವರು ಮಾರ್ಕೆಟ್ ಗೆ ತೆರಳಿದ್ದ ಸಂದರ್ಭದಲ್ಲಿ, ಅವರ ಮೊಬೈಲ್ ದೂರವಾಣಿಗೆ ಫೋನ್ ಕರೆ ಮಾಡಿದ ಖದೀಮ ವ್ಯಕ್ತಿಯೋರ್ವ ನಾನು ನವದೆಹಲಿಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಎಟಿಎಂ ಕಾರ್ಡ್ ಗಳ ಅಧಿಕಾರಿ ಪ್ರತಿನಿಧಿಯಾಗಿದ್ದು, ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ ಗ್ರೇಡ್ ಮಾಡಿ ನವೀಕರಿಸಬೇಕಾಗಿದೆ. ಕಾರ್ಡ್ ನ ಸಂಖ್ಯೆಯ ಮಾಹಿತಿ ನೀಡಿ ಎಂದು ಕೇಳಿದಾಗ ಅವರು ತಮ್ಮ ಕಾರ್ಡ್ ನ ನಂಬರ್ ಮಾಹಿತಿ ನೀಡಿದ್ದಾರೆ.

ಆನಂತರ ಇನ್ನೂ ಒಂದು ಕರೆ ಬಂದಿದ್ದು ನಿಮ್ಮ ಕುಟುಂಬದವರ ಹೆಸರಿನಲ್ಲಿ ವಿಮಾನಯಾನದ ಟಿಕೆಟ್ ಕಾಯ್ದಿರಿಸಲಾಗಿದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದಾಗ, ನಾನು ಯಾವುದೇ ರೀತಿಯ ವಿಮಾನದ ಟಿಕೆಟ್ ಬುಕ್ ಮಾಡಿಲ್ಲ ಎಂದು ಹೇಳಿ, ಸಂಶಯಗೊಂಡು ಕೂಡಲೇ ಬ್ಯಾಂಕ್ ಗೆ ತೆರಳಿ ಹಣ ವರ್ಗಾವಣೆ ಆಗದಂತೆ ತಡೆ ಒಡ್ಡಿ, ರದ್ದು ಮಾಡಿಸಿದ್ದಾರೆ. ಇಲ್ಲದೇ ಹೋದಲ್ಲಿ ಅವರ ಖಾತೆಯಲ್ಲಿನ 88 ಸಾವಿರ ರೂಗಳು ಲಪಟಾಯಿಸಲ್ಪಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಸದರಿ ಗ್ರಾಹಕರು ನೀಡಿದ ದೂರಿನ ಮೇರೆಗೆ ಗಾಂಧಿನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಬಡ ಮಹಿಳೆಯರಿಗೆ ಬಟ್ಟೆಗಳ ವಿತರಣೆ

ಬಳ್ಳಾರಿ, ಮೇ.30:ಪ್ರಗತಿ ಸೇವಾ ಟ್ರಸ್ಟ್ (ರಿ)ನ ಅಧ್ಯಕ್ಷ ಟಿ.ಎಸ್.ಸುರೇಶ್ ಕುಮಾರ್ ರ ಪುತ್ರರ ಜನ್ಮದಿನಾಚರಣೆ ಅಂಗವಾಗಿ ಬಡ ಮಹಿಳೆಯರಿಗೆ ಬಟ್ಟೆಗಳನ್ನು ವಿತರಿಸಿದರು.

ಸುರೇಶ್ ಕುಮಾರ್ ರ ಅವಳಿ, ಜವಳಿ ಪುತ್ರರಾದ ಸೂರ್ಯ ತೇಜ, ಸಾಯಿ ತೇಜರ ಜನ್ಮದಿನಾಚರಣೆ ಅಂಗವಾಗಿ ನಗರದ ಶ್ರೀ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದಲ್ಲಿ ಹಾಗೂ ದೇವಸ್ಥಾನದ ಎರಡು ದ್ವಾರಗಳ ಮುಂಭಾಗದಲ್ಲಿದ್ದ ಬಡ ಮಹಿಳೆಯರಿಗೆ ಬಟ್ಟೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ರಾಮದುರ್ಗ:ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಸಾವು

ಕೂಡ್ಲಿಗಿ, ಮೇ.30:ಮನೆಯಲ್ಲಿದ್ದ ಕುರಿಮರಿಗಳಿಗೆ ತಿನ್ನಲು ಸೊಪ್ಪು ತರಲೆಂದು ಬಾವಿ ದಂಡೆಯ ಮೇಲತ್ತಿ ಸೊಪ್ಪು ಮುರಿಯುತ್ತಿರುವಾಗ ಆಕಸ್ಮಿಕ ಕಾಲು ಜಾರಿ ಬಾವಿಯಲ್ಲಿ ಬಿದ್ದು 15 ವರ್ಷದ ಬಾಲಕಿಯೋರ್ವಳು ಮೃತಪಟ್ಟ ಘಟನೆ ರಾಮದುರ್ಗದಲ್ಲಿ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ಜರುಗಿದೆ.

ರಾಮದುರ್ಗದ ಮಹಾಲಕ್ಷ್ಮಿ (15) ಬಾವಿಗೆ ಬಿದ್ದು ಸಾವನ್ನಪ್ಪಿರುವ ದುರ್ದೈವಿ ಬಾಲಕಿಯಾಗಿದ್ದಾಳೆ. ಈಕೆಯು ಕುರಿಮರಿಗಳಿಗೆ ತಿನ್ನಲು ಸೊಪ್ಪು ತರಲೆಂದು ಗ್ರಾಮದ ಸಮೀಪವಿರುವ ಕುಂಚಿಗರ ಕಪ್ಪಲೆ ಬಾವಿಯ ದಂಡೆಯ ಮೇಲತ್ತಿ ಸೊಪ್ಪು ಮುರಿಯುತ್ತಿರುವಾಗ ಆಕಸ್ಮಿಕ ಕಾಲು ಜಾರಿ ಬಿದ್ದಿದ್ದು ಈಜು ಬಾರದೆ ಇದ್ದುದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆಂದು ತಂದೆ ತಮ್ಮಯ್ಯರ ಸಣ್ಣ ನಿಂಗಪ್ಪ ನೀಡಿದ ಹೇಳಿಕೆಯಂತೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಲಾರಿ ಢಿಕ್ಕಿ:ಕುದುರೆ ಸಾವು

ಬಳ್ಳಾರಿ, ಮೇ.30:ಲಾರಿಯೊಂದರ ಚಾಲಕನು ಅಜಾಗ್ರತೆ ಹಾಗೂ ಅತಿ ವೇಗದಿಂದ ಲಾರಿಯನ್ನು ಚಲಾಯಿಸಿ, ರಸ್ತೆಯಲ್ಲಿ ಹೋಗುತ್ತಿದ್ದ ಕುದುರೆಯೊಂದಕ್ಕೆ ಢಿಕ್ಕೀ ಹೊಡೆದ ಪರಿಣಾಮವಾಗಿ ಸಂಭವಿಸಿದ ಅಪಘಾತದಲ್ಲಿ ಕುದುರೆಯು ಮೃತಪಟ್ಟ ಘಟನೆ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಶ್ರೀನಿವಾಸ ಕ್ಯಾಂಪ್ ಹತ್ತಿರದ ರಸ್ತೆಯಲ್ಲಿ ನಡೆದಿದೆ.

ಸದರಿ ರಸ್ತೆಯಲ್ಲಿ ಲಾರಿಯೊಂದು ವೇಗವಾಗಿ ಸಾಗುತ್ತಾ, ರಸ್ತೆಯನ್ನು ದಾಟುತ್ತಿದ್ದ ಕುದುರೆಗೆ ಢಿಕ್ಕೀ ಹೊಡೆದ ಕಾರಣದಿಂದಾಗಿ, ಕುದುರೆಯು ತೀವ್ರವಾದ ಗಾಯಗಳಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ್ನು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆ ಶ್ರೀ ಬಾಲಾಂಜನೇಯ ಸ್ವಾಮಿಗಳ 3ನೇ ಆರಾಧನಾ ಮಹೋತ್ಸವ

ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಾರ್ಯಕ್ರಮ

ಬಳ್ಳಾರಿ, ಮೇ.30:ಬಳ್ಳಾರಿಯ ಶ್ರೀ ಬಾಲಾಂಜನೇಯ ಸ್ವಾಮಿಯವರ 3ನೇ ವರ್ಷದ ಆರಾಧನೆ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಮೇ.31ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ.

ನಾಳೆ ಭಾನುವಾರ ಬೆಳಿಗ್ಗೆ 9.30ಕ್ಕೆ ನಗರದ ಶ್ರೀ ಬಾಲಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಬಾಲಾಂಜನೇಯಸ್ವಾಮಿ ದೇವಸ್ಥಾನದ ಶ್ರೀ ಬಾಲಾನಂದಸ್ವಾಮಿಯವರು ವಹಿಸಲಿದ್ದು, ಬಳ್ಳಾರಿಯ ಸಂಸದ ಬಿ.ಶ್ರೀರಾಮುಲು ಅವರು ಉದ್ಘಾಟಿಸಲಿದ್ದಾರೆ.

ಶ್ರೀ ಬಾಲಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಮುಂಡ್ಲೂರು ಗೋಪಾಲ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ದಿವಾಕರ್ ಬಾಬು, ಮಾಜಿ ಶಾಸಕರುಗಳಾದ ನಾರಾ ಸೂರ್ಯನಾರಾಯಣರೆಡ್ಡಿ, ಜಿ.ಸೋಮಶೇಖರರೆಡ್ಡಿ ಉಪಸ್ಥಿತರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ, ವಿಮ್ಸ್ ನಿರ್ದೇಶಕ ಡಾ|| ವಿ.ಶ್ರೀನಿವಾಸ, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|| ಡಿ.ಶ್ರೀನಿವಾಸುಲು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶ್ರೀ ಬಾಲಾಂಜನೇಯ ಸ್ವಾಮಿಯವರ 3ನೇ ವರ್ಷದ ಆರಾಧನೆ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಕೆ.ಸಿ.ಶ್ರೀರಾಮುಲು, ಕಾರ್ಯದರ್ಶಿ ಶಂಕರಶಾಸ್ತ್ರಿ ಮತ್ತು ಇತರರು ಕೋರಿದ್ದಾರೆ.

ಕಲ್ಲಹಳ್ಳಿ: ನೀರು ಕುಡಿಯಲು ಹೋಗಿ ಗೋಕಟ್ಟೆಯ ನೀರಿನಲ್ಲಿ ಬಿದ್ದ ಯುವಕ ಸಾವು

ಕೂಡ್ಲಿಗಿ, ಮೇ.30:ಮೇಕೆ ಮೇಯಿಸಲೆಂದು ಹೋಗಿದ್ದ 17 ವರ್ಷದ ಯುವಕ ಬಾಯರಿಕೆ ನೀಗಿಸಲೆಂದು ಸಮೀಪದ ಕೆಂಗಲ ಗೋಕಟ್ಟೆಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ಠಾಣಾ ಸರಹದ್ದಿನ ಹಗರಿಬೊಮ್ಮನಹಳ್ಳಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಗುರುವಾರ ಸಂಜೆ ಜರುಗಿದೆ.

ಕಲ್ಲಹಳ್ಳಿಯ ಬಾರಿಕರ ಕರಿಬಸವರಾಜ (17) ಎಂಬಾತನೆ ಗೋಕಟ್ಟೆಯ ನೀರಿನಲ್ಲಿ ಕಾಲು ಜಾರಿಬಿದ್ದು ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ. ಈತನು ಗ್ರಾಮದ ತಳವಾರ ದುರುಗಪ್ಪ, ದೇವೇಂದ್ರಪ್ಪ ಎಂಬುವರ ಜೊತೆಗೆ ಮೇಕೆ ಮೇಯಿಸಿಕೊಂಡು ಬರಲು ಗ್ರಾಮದ ಸಮೀಪದ ಕೆಂಗಲ ಗೋಕಟ್ಟೆ ಹತ್ತಿರದ ಅಡವಿಯಲ್ಲಿ ಮೇಕೆ ಮೇಯಿಸಿಕೊಂಡು ಬರುತ್ತಿರುವಾಗ್ಗೆ ಬಾಯಾರಿಕೆಯಾದ್ದರಿಂದ ಗೋಕಟ್ಟೆಯಲ್ಲಿ ನೀರು ಕುಡಿಯಲು ಹೋಗಿದ್ದಾಗ ಆಕಸ್ಮಿಕ ಮೃತನ ತಂದೆ ಬಾರಿಕರ ಉಮೇಶಪ್ಪ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.